ನವದೆಹಲಿ:ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳೆಲ್ಲಾ ಸೇರಿಕೊಂಡು ಮಾಡಿಕೊಂಡಿರುವ ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯ ನಡುವೆ ಇದೇ ಡಿಸೆಂಬರ್ 19 ರಂದು ದಿಲ್ಲಿಯಲ್ಲಿ ಸಭೆ ಕರೆಯಲಾಗಿದೆ. ಅಲ್ಲಿ ಲೋಕಸಭೆ ಸೀಟು ಹಂಚಿಕೆಯ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಪಂಚರಾಜ್ಯ ಚುನಾವಣೆಗಳ ಹಿನ್ನೆಲೆಯಲ್ಲಿ ಮೈತ್ರಿಕೂಟದ ಬೈಠಕ್ ಈಚೆಗೆ ನಡೆದಿರಲಿಲ್ಲ. ಜೊತೆಗೆ ಚುನಾವಣೆಗಳಲ್ಲಿ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದವು. ಇದರಿಂದ ನಾಯಕರ ನಡುವೆ ಅಸಮಾಧಾನ ಉಂಟಾಗಿ ಬೈದಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಡಿಸೆಂಬರ್ 19 ರಂದು ದೆಹಲಿಯಲ್ಲಿ ಸಭೆ ಕರೆದಿದೆ.
ಅಂದು ನಡೆಯುವ ಸಭೆಯಲ್ಲಿ ಆದಷ್ಟು ಬೇಗ ಸೀಟು ಹಂಚಿಕೆ ಬಗ್ಗೆ ವಿಪಕ್ಷಗಳ ನಾಯಕರು ತುರ್ತು ಚರ್ಚೆ ನಡೆಸಲಿದ್ದಾರೆ. ಜೊತೆಗೆ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ರಾಜ್ಯವಾರು ಸಮಿತಿಗಳನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಮಾಜಿ ಸಂಸದ ಸಂಜಯ್ ನಿರುಪಮ್ ಈಟಿವಿ ಭಾರತ್‌ಗೆ ತಿಳಿಸಿದರು.
ನವದೆಹಲಿಯಲ್ಲಿ ನಡೆಯಲಿರುವ ಸಭೆಯು ಪಾಟ್ನಾ, ಬೆಂಗಳೂರು ಮತ್ತು ಮುಂಬೈ ನಂತರದ ಕೂಟದ ನಾಲ್ಕನೇ ಸಭೆಯಾಗಿದೆ. ಸೀಟು ಹಂಚಿಕೆ ಬಗ್ಗೆ ತಕ್ಷಣಕ್ಕೆ ಮಾತುಕತೆಗಳು ನಡೆಯಬೇಕಿದೆ. ನಂತರ ಕೂಟದ ಸಮನ್ವಯ ಸಮಿತಿಯಲ್ಲಿ ಪಟ್ಟಿಯನ್ನು ಚರ್ಚಿಸಿ ಅಂತಿಮಗೊಳಿಸಲಾಗುತ್ತದೆ. ಒಟ್ಟು 543 ಲೋಕಸಭಾ ಸ್ಥಾನಗಳ ಪೈಕಿ ಸುಮಾರು 400 ರಲ್ಲಿ ಬಿಜೆಪಿ ವಿರುದ್ಧ ಕೂಟದ ಅಭ್ಯರ್ಥಿಗಳನ್ನು ಹಾಕುವ ಗುರಿ ಇದೆ ಎಂದು ಅವರು ಮಾಹಿತಿ ನೀಡಿದರು.
ಪಕ್ಷಗಳ ಬಲಾಬಲದ ಮೇಲೆ ಸೀಟು ಹಂಚಿಕೆ:ಬಿಜೆಪಿಯನ್ನು ಪ್ರಬಲವಾಗಿ ಎದುರಿಸಲು ಮೈತ್ರಿಕೂಟದ ಪಕ್ಷಗಳು ಯಾವ ರಾಜ್ಯಗಳಲ್ಲಿ ಹೆಚ್ಚಿನ ಹಿಡಿತ ಹೊಂದಿವೆ ಎಂಬುದರ ಮೇಲೆ ಸೀಟು ಹಂಚಿಕೆ ನಡೆಯಲಿದೆ. ಮೈತ್ರಿ ಪಾಲುದಾರರು ಸಾಮಾನ್ಯ ಒಪ್ಪಂದಕ್ಕೆ ಬರಬೇಕು. ಪಂಚ ರಾಜ್ಯಗಳ ಚುನಾವಣೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಮಿತ್ರಪಕ್ಷಗಳಾದ ಜೆಡಿ - ಯು, ಆಪ್, ಆರ್ಜೆಡಿ ಕಾರ್ಯತಂತ್ರದ ವಿಳಂಬದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು.
ಸೀಟು ಹಂಚಿಕೆಯ ಜೊತೆಗೆ ಸಾಮಾನ್ಯ ಕನಿಷ್ಠ ಕಾರ್ಯಸೂಚಿಯನ್ನು ತ್ವರಿತವಾಗಿ ಅಂತಿಮಗೊಳಿಸುವ ಬಗ್ಗೆ ಮೈತ್ರಿ ಪಾಲುದಾರರು ಚರ್ಚಿಸಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಮುಂಬೈ ನಡೆದ ಸಭೆಯ ಬಳಿಕ ಯಾವುದೇ ಬೈಠಕ್ ನಡೆದಿಲ್ಲ. ಡಿ.19ರ ಸಭೆಯಲ್ಲಿ ಏನೆಲ್ಲ ವಿಚಾರಗಳ ಬಗ್ಗೆ ಚರ್ಚೆ ತ್ವರಿತವಾಗಿ ನಡೆಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಜಂಟಿ ಕಾರ್ಯಗಳ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಸೈಯದ್ ನಸೀರ್ ಹುಸೇನ್ ಈಟಿವಿ ಭಾರತ್‌ಗೆ ತಿಳಿಸಿದರು.
ಪ್ರಧಾನಿ ಮೋದಿಯನ್ನು ಸೋಲಿಸುವುದು ಪ್ರಮುಖ ಗುರಿಯಾಗಿದ್ದರೂ, ವಿರೋಧ ಪಕ್ಷದ ಮೈತ್ರಿಯು ದೇಶದ ಅಭಿವೃದ್ಧಿಯ ಪರ್ಯಾಯ ದೃಷ್ಟಿಕೋನವನ್ನು ಹೊಂದಿದೆ. ತೆಲಂಗಾಣದೊಂದಿಗೆ ಹಿಂದಿ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಗೆದ್ದಿದ್ದರೆ ಕಾಂಗ್ರೆಸ್ ಮೈತ್ರಿಕೂಟದೊಳಗೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತಿತ್ತು ಎಂದು ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದ ನಡೆ.. 5ನೇ ಗ್ಯಾರಂಟಿ ಯುವ ನಿಧಿ ಅನುಷ್ಠಾನದ ಕಡೆಗೆ: ರಣದೀಪ್ ಸಿಂಗ್ ಸುರ್ಜೇವಾಲ