ಆಂಧ್ರಪ್ರದೇಶ: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ 'ಭಾರತ್ ಜೋಡೋ ಯಾತ್ರೆ' ಶುಕ್ರವಾರ ಸಾಯಂಕಾಲ ಆಂಧ್ರಪ್ರದೇಶವನ್ನು ಪ್ರವೇಶಿಸಲಿದೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಉನ್ನತ ನಾಯಕರನ್ನು ಒಳಗೊಂಡ ಯಾತ್ರೆ ವಿರಾಮದ ನಂತರ ಬೆಳಗ್ಗೆ ರಾಂಪುರದಿಂದ ಪುನರಾರಂಭವಾಗಿದೆ. ಇಂದು ಆಂಧ್ರ ಪ್ರದೇಶದ ಓಬಳಾಪುರಂನಲ್ಲೂ ಪಾದಯಾತ್ರೆ ನಡೆಯಲಿದೆ. ಶನಿವಾರ 10 ಗಂಟೆಗೆ ಗಣಿನಾಡು ಬಳ್ಳಾರಿಗೆ ಪಾದಯಾತ್ರೆ ತಲುಪಿದ್ದು, ಕರ್ನಾಟಕಕ್ಕೆ ಮರಳಿದ ಬಳಿಕ ರಾಹುಲ್ ಗಾಂಧಿ ರಾತ್ರಿ ಬಳ್ಳಾರಿ ಜಿಲ್ಲೆಯ ಹಲಕುಂದಿ ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ರಾಂಪುರದಿಂದ ಮೆರವಣಿಗೆ ಆರಂಭವಾಗುತ್ತಿದ್ದಂತೆಯೇ ಮಾರ್ಗದುದ್ದಕ್ಕೂ ಬ್ಯಾನರ್‌ಗಳು, ಪೋಸ್ಟರ್‌ಗಳು ಮತ್ತು ಕಾಂಗ್ರೆಸ್ ಧ್ವಜಗಳು ಕಂಡು ಬಂದವು. ಅನೇಕ ಜನರು ಗಾಂಧಿಯವರಿಗೆ ಹಸ್ತಲಾಘವ ಮಾಡಿ ಅವರೊಂದಿಗೆ ಸಂವಾದ ನಡೆಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿ ಹಲವು ನಾಯಕರು ರಾಹುಲ್ ಗಾಂಧಿಗೆ ಸಾಥ್ ನೀಡುತ್ತಿದ್ದಾರೆ.
ಕೆಲಹೊತ್ತು ಯಾತ್ರೆ ಆಂಧ್ರಪ್ರದೇಶದಲ್ಲಿ ಸಾಗುತ್ತೆ:ಇಂದು ರಾಜ್ಯದಲ್ಲಿನ ಪಾದಯಾತ್ರೆ ವೇಳೆ ಬಳ್ಳಾರಿಯ ಗಡಿಭಾಗದಲ್ಲಿರುವುದರಿಂದ ಆಂಧ್ರಪ್ರದೇಶದಲ್ಲಿ ಸ್ವಲ್ಪ ಸಮಯ ಪಾದಯಾತ್ರೆ ನಡೆಯಲಿದೆ. ಆ ಬಳಿಕ ರಾಹುಲ್ ಗಾಂಧಿಯವರು ಮತ್ತೆ ಕರ್ನಾಟಕಕ್ಕೆ ಹಿಂದಿರುಗುತ್ತಾರೆ. ಕಾಂಗ್ರೆಸ್ ಪದಾಧಿಕಾರಿಗಳ ಪ್ರಕಾರ, ರಾಹುಲ್ ಗಾಂಧಿ ಅವರು ಜಾಜಿರಕಲ್ಲು ಟೋಲ್ ಪ್ಲಾಜಾ ಮೂಲಕ ಆಂಧ್ರಪ್ರದೇಶವನ್ನು ಪ್ರವೇಶಿಸುತ್ತಾರೆ. ಅಲ್ಲಿ ಅವರು ಸಂಜೆ 4.30 ರವರೆಗೆ ತಂಗಿ ಮತ್ತೆ ಯಾತ್ರೆ ಪುನರಾರಂಭಿಸುತ್ತಾರೆ.