ನವದೆಹಲಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ರೆಡ್ಡಿ ಅವರನ್ನು ಮಂಗಳವಾರ ಆಂಧ್ರ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶರ್ಮಿಳಾ ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ಸೇರಿದ್ದರು. ಅಲ್ಲದೇ ತಮ್ಮ ವೈಎಸ್ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಿದ್ದರು. ಈ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಶರ್ಮಿಳಾ ಅವರನ್ನು ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದೆ. ಪಕ್ಷ ಪ್ರಕಟಣೆ ಕೂಡ ಹೊರಡಿಸಿದೆ.
ಆಂಧ್ರಪ್ರದೇಶದ ಅಧ್ಯಕ್ಷ ಸ್ಥಾನಕ್ಕೆ ಗಿಡುಗು ರುದ್ರರಾಜು ರಾಜೀನಾಮೆ ನೀಡಿದ ಒಂದು ದಿನದ ನಂತರ ಕಾಂಗ್ರೆಸ್ನಲ್ಲಿ ಈ ಬೆಳವಣಿಗೆ ನಡೆದಿದೆ. ಸದ್ಯ ರುದ್ರರಾಜು ಅವರನ್ನು ಹೈಕಮಾಂಡ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ.
ಇದನ್ನೂ ಓದಿ:ರಾಹುಲ್, ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ ಆಂಧ್ರ ಸಿಎಂ ಜಗನ್ ಸಹೋದರಿ ಶರ್ಮಿಳಾ
ವೈಎಸ್ಆರ್ ವಿಲೀನದ ಬಳಿಕ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆಗೆ ಏರಿದ್ದು ಆಂಧ್ರದಲ್ಲಿಯೂ ಗೆಲ್ಲುವ ಭರವಸೆ ಹೊಂದಿದೆ. ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆ ಜೊತೆಗೆ ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದ್ದು ಕೈ ಪಕ್ಷ ಈಗಿನಿಂದಲೇ ಸಂಘಟನೆಯಲ್ಲಿ ತೊಡಗಿದೆ. ರಾಜ್ಯ ಇಬ್ಭಾಗವಾದ ನಂತರ ಸರಿಪಡಿಸಲಾಗದಷ್ಟು ಪಾತಾಳದಲ್ಲಿದ್ದ ಆಂಧ್ರ ಪ್ರದೇಶ ಕಾಂಗ್ರೆಸ್ಗೆ ಶರ್ಮಿಳಾ ಅವರ ಆಗಮನ ಹೊಸ ಉತ್ಸಾಹ ತಂದಿದೆ. ಈಗಾಗಲೇ ವೈಎಸ್‌ಆರ್‌ಸಿಪಿ ತೊರೆದಿರುವ ಹಲವು ಪ್ರಮುಖ ನಾಯಕರು ಪುನಃ ಕಾಂಗ್ರೆಸ್ ಪಕ್ಷ ಸೇರುವ ಬಯಕೆ ಇಟ್ಟುಕೊಂಡಿದ್ದಾರೆ.