ಶ್ರೀನಗರ( ಜಮ್ಮು ಕಾಶ್ಮೀರ):ಉಗ್ರನಿಗೆ ಆಶ್ರಯ ನೀಡಿದ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ನಿವಾಸಿ ಆಜಾದ್ ಅಹ್ಮದ್ ತೇಲಿ ಎಂಬುವವನ ವಸತಿ ಗೃಹವನ್ನು ಪೊಲೀಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್‌ನ ಸಂಘಟನೆಯ ಭಯೋತ್ಪಾದಕ ರಿಯಾಜ್ ನಾಯ್ಕೂಗೆ ಆಶ್ರಯ ನೀಡಿದ್ದಕ್ಕಾಗಿ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಸ್ಥಿರಾಸ್ತಿಯನ್ನು ಜಪ್ತಿ ಮಾಡಲು ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. ಕಳೆದ 24 ಗಂಟೆಗಳಲ್ಲಿ ಉಗ್ರರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲ ನೀಡಿದ ಹಾಗೂ ಉಗ್ರರಿಗೆ ಆಶ್ರಯ ನೀಡಿದ ಎರಡು ಮನೆಗಳನ್ನು ಜಪ್ತಿ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಇಂದು ಪೊಲೀಸ್ ಅಧಿಕಾರಿಗಳು ಮನೆ ಜಪ್ತಿಮಾಡಿದ್ದಾರೆ.
ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ನಿಷೇಧಿತ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್‌ನ ರಿಯಾಜ್ ನಾಯ್ಕೂ ಅಲಿಯಾಸ್ ಜುಬೇರ್ - ಉಲ್ - ಇಸ್ಲಾಂ ಸೇರಿದಂತೆ ಇಬ್ಬರು ಭಯೋತ್ಪಾದಕರಿಗೆ ತೇಲಿ ಆಶ್ರಯ ನೀಡಿದ್ದಾನೆ. ಈ ಹಿನ್ನೆಲೆ ಆಜಾದ್ ಅಹ್ಮದ್ ತೇಲಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಸೆಕ್ಷನ್ 19 ಯುಎಪಿಎ ಅಡಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರನ ಆಸ್ತಿ ಜಪ್ತಿ:ಇತ್ತೀಚೆಗೆ ಇಂತಹದ್ದೇ ಘಟನೆಯಲ್ಲಿಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ತನಿಖಾ ಘಟಕ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಕಚಮಾ ಕುಪ್ವಾರದ ಆದಿಲ್ ರಶೀದ್ ಖುರೇಷಿ ಅಲಿಯಾಸ್ ಫಾರೂಕ್ ಖುರೇಷಿಗೆ ಸೇರಿದ ಜಮೀನನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಕುಪ್ವಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ತನಿಖೆ ಕೈಗೊಂಡಿದ್ದ ಅಧಿಕಾರಿಗಳು ಆದಿಲ್ ರಶೀದ್ ಖುರೇಷಿಗೆ ಸೇರಿದ್ದ ಸ್ಥಳವನ್ನು ಗುರುತಿಸಿ ಜಪ್ತಿಮಾಡಿದ್ದರು. ಫಾರೂಕ್ ಖುರೇಷಿ 1990ರ ದಶಕದ ಆರಂಭದಲ್ಲಿ ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿತ್ತು.
ಅಂದಿನಿಂದ ಈತ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡುವ ಮತ್ತು ಭಯೋತ್ಪಾದನ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ. ಈತ ಅಲ್-ಬಾರ್ಕ್ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿದ್ದಾನೆ. ಪ್ರಸ್ತುತ ಪಾಕ್ ಆಕ್ರಮಿತ ಕಾಶ್ಮೀರದ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಗಡಿಯಲ್ಲಿ ನಡೆದ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಈತನ ಕೈವಾಡವಿದೆ ಎಂಬುದು ಪೊಲೀಸ್ ಅಧಿಕಾರಿಗಳು ಪತ್ತೆಹಚ್ಚಿದ್ದರು. ಬಳಿಕ ಆತನಗೆ ಸೇರಿದ್ದ ಆಸ್ತಿಯನ್ನು ಜಪ್ತಿ ಮಾಡಿದ್ದರು.
ಇದನ್ನೂ ಓದಿ:ಗೋವಾದಿಂದ ತೆಲಂಗಾಣಕ್ಕೆ ಅಕ್ರಮವಾಗಿ ಮದ್ಯ ಸಾಗಣೆ: ₹43 ಲಕ್ಷ ಮೌಲ್ಯದ ಮದ್ಯ ಜಪ್ತಿ