ಮುಜಾಫರ್‌ಪುರ: ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳಾ ಶಿಕ್ಷಣದ ಪಾತ್ರದ ಕುರಿತು ಮಂಗಳವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ನೀಡಿದ್ದ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಹೇಳಿಕೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ತೀವ್ರವಾಗಿ ಖಂಡಿಸಿದ್ದಾರೆ. ಇದೀಗ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದೆ. ನಿತೀಶ್ ಕುಮಾರ್ ವಿರುದ್ಧ ಮುಜಾಫರ್‌ಪುರದ ಸಿಜೆಎಂ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ನಿತೀಶ್ ಕುಮಾರ್ ವಿರುದ್ಧ ದೂರು :ಸದನದಲ್ಲಿ ನಿತೀಶ್ ನೀಡಿರುವ ಹೇಳಿಕೆ ವಿರುದ್ಧ ವಕೀಲ ಅನಿಲ್ ಕುಮಾರ್ ಸಿಂಗ್ ಈ ದೂರು ದಾಖಲಿಸಿದ್ದಾರೆ. ಅನಿಲ್ ಕುಮಾರ್ ಸಿಂಗ್ ಅವರು 354ಡಿ, 504, 505,509 ಐಪಿಸಿ ಮತ್ತು 67 ಐಟಿ ಕಾಯ್ದೆ ಅಡಿ ದೂರು ದಾಖಲಿಸಿದ್ದಾರೆ. ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಪಂಕಜ್ ಕುಮಾರ್ ಲಾಲ್ ಅವರು ನವೆಂಬರ್ 25 ರಂದು ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದೇನು? :ಮಂಗಳವಾರ ನಿತೀಶ್ ಕುಮಾರ್ ಅವರು ಸದನದಲ್ಲಿ ಜಾತಿ ಗಣತಿ ಕುರಿತು ತಮ್ಮ ನಿಲುವನ್ನು ಮಂಡಿಸುತ್ತಿದ್ದರು. ಈ ಸಂದರ್ಭದಲ್ಲಿ ಬಿಹಾರದ ಜನಸಂಖ್ಯೆ ಹೇಗೆ ನಿಯಂತ್ರಿಸಲಾಗಿದೆ ಎಂಬುದನ್ನು ಅವರು ಹೇಳಿದರು. ರಾಜ್ಯದಲ್ಲಿ ಸಂತಾನೋತ್ಪತ್ತಿ ಪ್ರಮಾಣ ಶೇ 4.2 ರಿಂದ 2.9ಕ್ಕೆ ಕುಸಿದಿದೆ ಎಂದು ಮಾಹಿತಿ ನೀಡುವ ಸಂದರ್ಭದಲ್ಲಿ ಜನಸಂಖ್ಯಾ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಲು ಹೆಣ್ಣುಮಕ್ಕಳಿಗೆ ಶಿಕ್ಷಣದ ಅಗತ್ಯವಿದೆ ಎಂದಿದ್ದರು.
ಜನಸಂಖ್ಯೆ ನಿಯಂತ್ರಣ ಮಾಡುವಲ್ಲಿ ಮಹಿಳೆಯರು ಶಿಕ್ಷಣ ಹೊಂದಿರುವುದು ಮುಖ್ಯ ಪಾತ್ರ ವಹಿಸುತ್ತದೆ. ವಿದ್ಯಾವಂತ ಮಹಿಳೆಯು ಗಂಡ ಲೈಂಗಿಕ ಕ್ರಿಯೆಯಲ್ಲಿ ತೊಡಗದಂತೆ ನಿರ್ಬಂಧ ಹೇರುವ ಸಾಮರ್ಥ್ಯ ಹೊಂದಿರುತ್ತಾಳೆ. ಜನನ ಪ್ರಮಾಣ ಹೆಚ್ಚಳಕ್ಕೆ ಪತಿಯ ಕೃತ್ಯ ಕಾರಣವಾಗುತ್ತದೆ. ಶಿಕ್ಷಣ ಪಡೆದ ಮಹಿಳೆ ಪತಿಯನ್ನು ನಿಯಂತ್ರಿಸುವುದನ್ನು ತಿಳಿದುಕೊಂಡಿರುತ್ತಾಳೆ. ಜನನ ಪ್ರಮಾಣದಲ್ಲಿ ಇಳಿಕೆಯಾಗಲು ಮಹಿಳೆಯರು ಶಿಕ್ಷಿತರಾಗಿರುವುದೇ ಕಾರಣ" ಎಂದು ಹೇಳಿದ್ದರು.
ನಿತೀಶ್ ಕ್ಷಮೆ :ಮಂಗಳವಾರ ಸದನದಲ್ಲಿ ನೀಡಿದ ಹೇಳಿಕೆಗೆ ನಿತೀಶ್ ಕುಮಾರ್ ಬುಧವಾರ ಕ್ಷಮೆಯಾಚಿಸಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕೈಮುಗಿದು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. ಯಾರನ್ನೂ ನೋಯಿಸಲು ನಾನು ಈ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಮಹಿಳಾ ಆಯೋಗ ತೀವ್ರ ಅಸಮಾಧಾನ:ನಿತೀಶ್ ಮಂಗಳವಾರ ಸದನದಲ್ಲಿ ನೀಡಿದ ಹೇಳಿಕೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಬಳಸಿದ ಭಾಷೆ ಅಶ್ಲೀಲ ಹಾಗೂ ನಾಚಿಕೆಗೇಡಿನದ್ದು ಎಂದು ಖಂಡಿಸಿತ್ತು. ನಿತೀಶ್ ಕುಮಾರ್ ಅವರು ಈ ಕುರಿತು ಕ್ಷಮೆ ಯಾಚಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಅಧ್ಯಕ್ಷೆ ರೇಖಾ ಶರ್ಮಾ ಆಗ್ರಹಿಸಿದ್ದರು.
ಇದನ್ನೂ ಓದಿ:ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ: ಕ್ಷಮೆ ಯಾಚಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್