ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿ, ಕಾಶ್ಮೀರ ರಾಜಸ್ಥಾನ, ಹರಿಯಾಣ, ಪಂಜಾಬ್ ಸೇರಿದಂತೆ ಉತ್ತರ ಭಾರತದಲ್ಲಿ ಶೀತಗಾಳಿ, ಚಳಿ ತೀವ್ರವಾಗಿದೆ. ಕೆಲವೆಡೆ ತಾಪಮಾನ 2 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯ ಕಾರಣ, ದೆಹಲಿಯಲ್ಲಿ ಮುಂದಿನ ಐದು ದಿನಗಳು ಅಂದರೆ ಜನವರಿ 12ರವರೆಗೆ ನರ್ಸರಿಯಿಂದ 5ನೇ ತರಗತಿವರೆಗಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ದೆಹಲಿಯಲ್ಲಿ ತೀವ್ರ ಶೀತಗಾಳಿ, ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ, ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಮಾನ್ಯತೆ ಪಡೆದ ಖಾಸಗಿ ಶಾಲೆಗಳಲ್ಲಿ ಚಳಿಗಾಲದ ರಜೆಯನ್ನು ಜನವರಿ 10ರವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿತ್ತು. ಕೆಲವು ಗಂಟೆಗಳ ಬಳಿಕ ವಿಸ್ತರಣೆ ಆದೇಶವನ್ನು ಹಿಂತೆಗೆದುಕೊಂಡಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರಾದ ಅತಿಶಿ, ದಿಲ್ಲಿಯಲ್ಲಿ ಕೊರೆಯುವ ಚಳಿ ಕಾರಣ ಚಿಕ್ಕಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ನರ್ಸರಿಯಿಂದ 5 ನೇ ತರಗತಿಗಲಿಗೆ 12 ರವರೆಗೂ ರಜೆ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೈ ಕೊರೆಯುವ ಚಳಿಗೆ ಜನ ತತ್ತರ:ದೆಹಲಿ, ಪೂರ್ವ ರಾಜಸ್ಥಾನದ ಕೆಲವು ಭಾಗಗಳು, ವಾಯವ್ಯ ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಕೊರೆಯುವ ಚಳಿಯಿಂದಾಗಿ ಸೂರ್ಯೋದಯವೇ ಕಾಣದಂತಾಗಿದೆ. ಹವಾಮಾನ ದಿನದಿಂದ ದಿನಕ್ಕೆ ಅತಿ ಶೀತಲವಾಗುತ್ತಿದೆ. ಸೂರ್ಯನ ಕಿರಣಗಳೇ ಇಲ್ಲಿ ಅಗೋಚರವಾಗಿವೆ. ವಿವಿಧ ರೈಲು ನಿಲ್ದಾಣಗಳಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಸಂಚಾರ ವ್ಯತ್ಯಯ ಉಂಟಾಗಿತ್ತು.