ಕಾಸರಗೋಡು :ಕೇರಳದ ಕಾಸರಗೋಡು ಜಿಲ್ಲೆಯ ತೋಟವೊಂದರಲ್ಲಿ ವಿಸ್ಮಯವೊಂದು ನಡೆದಿದೆ. ನೀರು, ಗೊಬ್ಬರ ಹಾಕಿ ತೆಂಗಿನಕಾಯಿ ಚೆನ್ನಾಗಿ ಬಿಡಲಿ ಎಂದು ಬೆಳೆಸಿದ ಮರವೊಂದರಲ್ಲಿ ತೆಂಗಿನಕಾಯಿ ಬದಲಿಗೆ ಅದರೊಳಗೇ ಮತ್ತೆ ಸಸಿಗಳು ಮೊಳಕೆಯೊಡೆದಿದ್ದು, ತೋಟದ ಮಾಲೀಕ ಕಂಗಾಲಾಗಿದ್ದಾರೆ.
ಕಾಸರಗೋಡಿನ ಮಂಗಾದ್ ಅರಮಂಗನಂನಲ್ಲಿನ ಹಡ್ಡಾದ್ ನಗರದ ನಿವಾಸಿ ಮೊಹಮ್ಮದ್ ಕುಂಜಿಯ ತಮ್ಮ ತೋಟದಲ್ಲಿ ಬೆಳೆಸಿದ ತೆಂಗಿನ ಮರದ ಮೇಲ್ಭಾಗದಿಂದ 12 ತೆಂಗಿನ ಸಸಿಗಳು ಮೊಳಕೆಯೊಡೆದಿರುವುದನ್ನ ನೋಡಬಹುದು. ಇದು ಏಕೆ ಅಥವಾ ಹೇಗೆ ಸಂಭವಿಸಿದೆ ಎಂಬುದಕ್ಕೆ ಮುಹಮ್ಮದ್ ಕುಂಜಿ ಅವರ ಬಳಿ ಉತ್ತರವಿಲ್ಲ.
ಕಳೆದ 6 ವರ್ಷಗಳ ಹಿಂದೆ ಈ ತೆಂಗಿನ ಸಸಿ ನೆಡಲಾಗಿದೆ ಎಂದು ಕುಂಜಿ ಹೇಳುತ್ತಾರೆ. ಈ ಸಸಿ ಜೊತೆ ನೆಟ್ಟ ಇತರೆ ತೆಂಗಿನ ಸಸಿಗಳು ಬೆಳೆದು ಕಾಯಿ ಬಿಡುತ್ತಿವೆ. ಆದರೆ, ಈ ಮರ ಮಾತ್ರ ಕಾಯಿ ಬಿಡುವ ಸ್ಥಳದಲ್ಲಿ ಸಸಿಯನ್ನೇ ಬಿಡುತ್ತದೆ. ಇದಕ್ಕೆ ಕಾರಣವೇನೆಂದು ತಿಳಿಯದೇ ಕುಂಜಿ ಗೊಂದಲಕ್ಕೊಳಗಾಗಿದ್ದಾರೆ.