ಚಂಡೀಗಢ:ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ತಮ್ಮ ಹೊಸ ಮಂತ್ರಿಗಳಿಗೆ ಖಾತೆಗಳನ್ನು ಹಂಚಿದರು. ಅಲ್ಲದೇ ಅವರ ಸರ್ಕಾರದ ಇತರ ಮಂತ್ರಿಗಳ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿದೆ.
ಅಮನ್ ಅರೋರಾ, ಇಂದರ್‌ಬೀರ್ ಸಿಂಗ್ ನಿಜ್ಜರ್, ಚೇತನ್ ಸಿಂಗ್ ಜೌರಮಜ್ರಾ, ಫೌಜಾ ಸಿಂಗ್ ಸರಾರಿ ಮತ್ತು ಅನ್ಮೋಲ್ ಗಗನ್ ಮಾನ್ ಅವರು ಸೋಮವಾರ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಈ ವರ್ಷದ ಆರಂಭದಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾನ್ ಕ್ಯಾಬಿನೆಟ್‌ನ ಮೊದಲ ಸಂಪುಟ ವಿಸ್ತರಣೆ ಇದಾಗಿದೆ.
ಸಚಿವರಿಗೆ ಹಂಚಿಕೆ ಮಾಡಲಾದ ಖಾತೆಗಳ ವಿವರ ಚೇತನ್ ಸಿಂಗ್ ಜೌರಮಜ್ರಾ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಮನ್ ಅರೋರಾ ಅವರು ಮಾಹಿತಿ, ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಇಂದರ್ಬೀರ್ ನಿಜ್ಜರ್ ಅವರಿಗೆ ಸಂಸದೀಯ ವ್ಯವಹಾರಗಳು, ಭೂಮಿ ಸಂರಕ್ಷಣೆ ಮತ್ತು ನೀರು ಹಂಚಿಕೆ ಖಾತೆ ನೀಡಲಾಗಿದೆ. ಅನ್ಮೋಲ್ ಮಾನ್ ಅವರಿಗೆ ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿದೆ. ಫೌಜಾ ಸಿಂಗ್ ರಕ್ಷಣಾ ಸೇವೆಗಳ ಕಲ್ಯಾಣ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಉಸ್ತುವಾರಿ ವಹಿಸಲಿದ್ದಾರೆ.
ಇದನ್ನೂ ಓದಿ:ಬಜೆಟ್ ಮಂಡನೆ ಆಯ್ತು...ಸಚಿವ ಸಂಪುಟ ವಿಸ್ತರಣೆಗೆ ಭಗವಂತ್ ಮಾನ್ ಸಿದ್ಧತೆ: ಕೇಜ್ರಿವಾಲ್ ಭೇಟಿ, ಚರ್ಚೆ
ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಜೆಟ್ ಮಂಡಿಸಿದ ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆ ನಡೆದಿದೆ. ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು ಮಂಡಿಸಿದ ಬಜೆಟ್ ಶಾಲೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಲು ಹೆಚ್ಚು ಮಹತ್ವವನ್ನು ನೀಡಿದೆ.