ಕುಲ್ಗಾಮ್ (ಜಮ್ಮು ಮತ್ತು ಕಾಶ್ಮೀರ):ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಭದ್ರತಾ ಪಡೆಗಳು ಮತ್ತು ಪ್ರತ್ಯೇಕತಾವಾದಿ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ರಾಷ್ಟ್ರೀಯ ರೈಫಲ್ಸ್‌ನ ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಲ್ಗಾಮ್ ಜಿಲ್ಲೆಯ ಹಾಲನ್ ಗ್ರಾಮದಲ್ಲಿ ಘರ್ಷಣೆ ನಡೆದಿದೆ.
ಉಗ್ರರ ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಅಡಗಿ ಕುಳಿತಿದ್ದ ಉಗ್ರರು ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಕೂಡ ಪ್ರತಿದಾಳಿ ನಡೆಸಿದ್ದಾರೆ. ಇದರಿಂದ ಗುಂಡಿನ ಚಕಮಕಿ ನಡೆದಿದೆ. ಆರಂಭಿಕ ಗುಂಡಿನ ದಾಳಿಯಲ್ಲಿ 34ನೇ ರಾಷ್ಟ್ರೀಯ ರೈಫಲ್ಸ್‌ನ ಮೂವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಸೇನೆ ತಿಳಿಸಿದೆ.
ಈ ಪ್ರದೇಶದಲ್ಲಿ ಎರಡರಿಂದ ಮೂವರು ಉಗ್ರರು ಅಡಗಿರುವ ಸಾಧ್ಯತೆಯಿದೆ. ಆದರೆ, ಪೊಲೀಸರು, ಸೇನಾ ಸಿಬ್ಬಂದಿ ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಭದ್ರತಾ ಸಿಬ್ಬಂದಿ ಮತ್ತು ಉಗ್ರಗಾಮಿಗಳು ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ.
ನಾಲ್ಕನೇ ವಾರ್ಷಿಕೋತ್ಸವಕ್ಕೂ ಮುನ್ನವೇ ಗುಂಡಿನ ದಾಳಿ:35 ಎ ಮತ್ತು 370ನೇ ವಿಧಿಯ ರದ್ದಾಗಿ ನಾಲ್ಕನೇ ವಾರ್ಷಿಕೋತ್ಸವಕ್ಕೆ ಒಂದು ದಿನದ ಬಾಕಿ ಇರುವಾಗಲೇ ಗುಂಡಿನ ಚಕಮಕಿ ನಡೆದಿದೆ. 370 ಕಲಂ ರದ್ದಾದ ನಂತರ, ಉಗ್ರಗಾಮಿ ಸಂಘಟನೆಗಳು ಮಾತ್ರವಲ್ಲದೇ ಪ್ರತ್ಯೇಕತಾವಾದಿಗಳನ್ನು ದಮನ ಮಾಡುವ ಕಾರ್ಯ ಪ್ರಾರಂಭಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಅದರಲ್ಲೂ ವಿಶೇಷವಾಗಿ ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿತ್ವವನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಉನ್ನತ ಸೇನೆ ಮತ್ತು ಪೊಲೀಸ್ ಅಧಿಕಾರಿಗಳು ಪದೇ ಪದೇ ಹೇಳುತ್ತಿದ್ದಾರೆ. ಭದ್ರತಾ ಸಂಸ್ಥೆಗಳು ನೀಡಿದ ಅಂಕಿಅಂಶಗಳ ಪ್ರಕಾರ, ಸದ್ಯ ಕಾಶ್ಮೀರ ಕಣಿವೆಯಲ್ಲಿ ನೂರಕ್ಕಿಂತಲೂ ಕಡಿಮೆ ಉಗ್ರರಿದ್ದಾರೆ. ಈ ಉಗ್ರರು ಹೆಚ್ಚಾಗಿ ದಕ್ಷಿಣ ಕಾಶ್ಮೀರದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ದಕ್ಷಿಣ ಕಾಶ್ಮೀರದ ಬಹುತೇಕ ಎಲ್ಲ ಜಿಲ್ಲೆಗಳು ವಿಶೇಷವಾಗಿ ಪುಲ್ವಾಮಾ, ಶೋಪಿಯಾನ್ ಮತ್ತು ಕುಲ್ಗಾಮ್ ಪ್ರದೇಶದಲ್ಲಿ ಉಗ್ರಗಾಮಿತ್ವ ಸಕ್ರಿಯವಾಗಿದೆ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ:Seema Haider: ಭಾರತ-ನೇಪಾಳ ಗಡಿಯಲ್ಲಿ ಸೀಮಾ ಹೈದರ್ ಒಳಬಿಟ್ಟ ಇನ್ಸ್‌ಪೆಕ್ಟರ್, ಕಾನ್‌ಸ್ಟೇಬಲ್ ಸಸ್ಪೆಂಡ್