ನವದೆಹಲಿ: ನಿಜವಾಗಿಯೂ ಅಗತ್ಯವಿಲ್ಲದ ಪ್ರಕರಣಗಳನ್ನು ಮುಂದೂಡಬೇಡಿ. ಕೋರ್ಟ್ ತಾರೀಖ್ ಪೆ ತಾರೀಖ್(date-pay-date) ನ್ಯಾಯಾಲಯವಾಗಲು ಸಾಧ್ಯವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ವಕೀಲರಿಗೆ ಹೇಳಿದರು.
ಪ್ರಕರಣಗಳ ವಿಚಾರಣೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಾಲಯದಲ್ಲಿ ತೋರಿಸುತ್ತಾ, ಸೆಪ್ಟೆಂಬರ್ ಮತ್ತು ಅಕ್ಟೋಬರ್ 2 ತಿಂಗಳುಗಳಲ್ಲಿ ವಕೀಲರು ಸುಮಾರು 3,688 ಪ್ರಕರಣಗಳಲ್ಲಿ ಅರ್ಜಿ ವಿಚಾರಣೆಗಳನ್ನು ಮುಂದೂಡಿಕೆ ಮಾಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಈ ಅಂಕಿ- ಅಂಶಗಳನ್ನು ಮುಂದಿಟ್ಟು ಮುಖ್ಯನ್ಯಾಯಮೂರ್ತಿಗಳು ಈ ಮಾತು ಹೇಳಿದ್ದಾರೆ.
ಇದೇ ವಿಚಾರವಾಗಿ ಮುಂದುವರೆದು ಮಾತನಾಡಿದ ಅವರು, ಪ್ರಕರಣಗಳ ಅವಧಿಯನ್ನು ಕನಿಷ್ಠಕ್ಕೆ ಇಳಿಸುವುದನ್ನು ಖಚಿತಪಡಿಸಿಕೊಳ್ಳಲು ಆ ವಿಷಯಗಳನ್ನು ಆದ್ಯತೆ ಮೇಲೆ ಯಾವುದನ್ನು ವಿಚಾರಣೆಗೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಹಾಗೇ ಇಲ್ಲಿ ಮುಂದೂಡಲ್ಪಟ್ಟಿರುವ ಒಟ್ಟು ಪ್ರಕರಣಗಳೇ ನಿಮಗೆ ವಾಸ್ತವತೆ ಏನು ಎಂಬುದನ್ನು ವಿವರಿಸುತ್ತದೆ. ಆದ್ದರಿಂದ ಈ ನ್ಯಾಯಾಲಯವು ತಾರೀಖ್ ಪೆ ತಾರೀಖ್ ನ್ಯಾಯಾಲಯವಾಗುವುದು ನನಗೆ ಇಷ್ಟವಿಲ್ಲ. ಈ ರೀತಿಯಾಗಿ ಪ್ರಕರಣಗಳನ್ನು ಮುಂದು ಹಾಕಲ್ಪಟ್ಟರೆ ನಾವು ನಾಗರಿಕರಿಗೆ ಹೇಗೆ ಉತ್ತರ ಕೊಡಲು ಸಾಧ್ಯವಾಗುತ್ತದೆ ಹಾಗೂ ಹೇಗೆ ಸಮರ್ಥನೆ ಮಾಡಿಕೊಳ್ಳಲು ಸಾಧ್ಯ ಹೇಳಿ ಎಂದು ವಕೀಲರನ್ನು ಪ್ರಶ್ನಿಸಿದರು. ಇದೇ ರೀತಿಯ ಪ್ರವೃತ್ತಿ ಮುಂದುವರೆದರೆ, ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ಸಾರ್ವಜನಿಕರಲ್ಲಿ ಉತ್ತಮ ಭಾವನೆ ಮೂಡುವುದಿಲ್ಲ. ಹೀಗಾಗಿ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಸರಿಪಡಿಸಿಕೊಳ್ಳಲು ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ವಿವರಿಸಿದರು.