ಪಣಜಿ (ಗೋವಾ) : ನಾಲ್ಕು ವರ್ಷದ ಮಗುವನ್ನು ಕೊಂದ ಆರೋಪ ಹೊತ್ತಿರುವ ಸ್ಟಾರ್ಟ್‌ಅಪ್‌ನ ಸಿಇಒ ಸುಚನಾ ಸೇಠ್ ಅವರನ್ನು ಶುಕ್ರವಾರ ಗೋವಾ ಪೊಲೀಸರು ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಅವರು ತಂಗಿದ್ದ ಅಪಾರ್ಟ್‌ಮೆಂಟ್‌ಗೆ ಕರೆದೊಯ್ಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ ಇದು ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಸುಚನಾ ಸೇಠ್ (39) ಜನವರಿ 6 ರಂದು ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಜನವರಿ 8 ರವರೆಗೆ ವಾಸವಾಗಿದ್ದರು. ಅಲ್ಲಿಂದ ಮಗುವನ್ನ ಕಾರಿನ ಲಗೇಜ್ನಲ್ಲಿ ಇಟ್ಟು ಬೆಂಗಳೂರಿನತ್ತ ಸಾಗುತ್ತಿದ್ದಾಗ, ಚಿತ್ರದುರ್ಗದ ಐಮಂಗಲ ಠಾಣೆಯ ಪೊಲೀಸರು ಆಕೆಯನ್ನು ಸೋಮವಾರ ರಾತ್ರಿ ಬಂಧಿಸಿದ್ದರು. ನಂತರ ಮಂಗಳವಾರ ಗೋವಾಕ್ಕೆ ಕರೆತರಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಚಾರಣೆಯ ವೇಳೆ ತಾನು ಎದುರಿಸಿದ ಸಂಕಷ್ಟದ ದಾಂಪತ್ಯದ ಬಗ್ಗೆ ಸೇಠ್ ಹೇಳಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಗು ಕೊಲೆ ಆರೋಪದ ಮೇಲೆ ಅವರು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದರು. ಆದರೆ, ಅಧಿಕಾರಿಗಳು ಇನ್ನೂ ಕೊಲೆಯ ಹಿಂದಿನ ಸ್ಪಷ್ಟ ಉದ್ದೇಶವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಪ್ರಕರಣದ ತನಿಖೆಯ ಭಾಗವಾಗಿ "ಅಪರಾಧದ ದೃಶ್ಯದ ಮರುಸೃಷ್ಠಿ" ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.