ನಳಂದ(ಬಿಹಾರ):ಹಳೆ ದ್ವೇಷಕ್ಕೆ ಐದು ತಿಂಗಳ ಮಗು ಬಲಿಯಾಗಿದೆ. ದುಷ್ಕರ್ಮಿಗಳು ಒಂದೇ ಕುಟುಂಬದ ಐವರ ಮೇಲೆ ದೊಣ್ಣೆ ಹಾಗೂ ರೈಫಲ್ನಿಂದ ಹಲ್ಲೆ ನಡೆಸಿದ್ದು, ತೀವ್ರ ಗಾಯಗೊಂಡಿದ್ದ ಐದು ತಿಂಗಳ ಮಗು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ.
ನಳಂದದ ಪಾವಪುರಿ ಪ್ರದೇಶದಲ್ಲಿರುವ ವರ್ಧಮಾನ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಕುಟುಂಬದ ಇತರ ಸದಸ್ಯರಿಗೆ ಚಿಕಿತ್ಸೆ ಮುಂದುವರೆದಿದೆ. ಘಟನೆ ಬಳಿಕ ದುಷ್ಕರ್ಮಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ. ನವಜಾತ ಶಿಶುವು ವೇನಾ ಪೊಲೀಸ್ ಠಾಣೆ ವ್ಯಾಪ್ತಿಯ ಚಂದೌರಾ ಗ್ರಾಮದ ಬಳಿರಾಮ್ ಪಾಸ್ವಾನ್ ಅವರದ್ದಾಗಿದೆ. ಘಟನೆಯ ನಂತರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.