ಚೆನ್ನೈ (ತಮಿಳುನಾಡು): ಮಿಚೌಂಗ್ ಚಂಡಮಾರುತದ ಮಳೆಯಿಂದಾಗಿ ಮೃತಪಟ್ಟ ನವಜಾತ ಶಿಶುವಿನ ಶವ ಕೊಡಲು 2,500 ಲಂಚ ಕೇಳಿದ್ದಲ್ಲದೇ, ಬಟ್ಟೆಯಲ್ಲಿ ಶವ ಸುತ್ತದೇ ರಟ್ಟಿನ ಪೆಟ್ಟಿಗೆಯಲ್ಲಿ ನೀಡಿದ್ದ ಸುದ್ದಿ ವೈರಲ್ ಆಗುತ್ತಿದ್ದಂತೆ ಕಿಲ್ಪಾಕ್ ವೈದ್ಯಕೀಯ ಕಾಲೇಜಿನ ಶವಾಗಾರ ಸಹಾಯಕ ಪನ್ನೀರಸೆಲ್ವಂ ಅವರನ್ನು ಅಮಾನತುಗೊಳಿಸಲಾಗಿದೆ. ಈ ಅಮಾನತಿನ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಟೀಕೆ ಮಾಡಿದ್ದು, ಸರ್ಕಾರ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದಿದ್ದಾರೆ.
ತಿಂಗಳ ಆರಂಭದಲ್ಲಿ ಚೆನ್ನೈಗೆ ಅಪ್ಪಳಿಸಿದ ಮಿಚೌಂಗ್ ಚಂಡಮಾರುತ ಹಲವಾರು ದಾರುಣ ಘಟನೆಗಳಿಗೆ ಕಾರಣವಾಗಿದೆ. ಡಿಸೆಂಬರ್ 5 ರಂದು ಸುರಿದ ಮಳೆಗೆ ಪುಲಿಯಾಂತೋಪ್ಪು ಪ್ರದೇಶದ ಸಂಪೂರ್ಣ ಜಲಾವೃತವಾಗಿತ್ತು. ಇದೇ ವೇಳೆ ಇಲ್ಲಿನ ಕೂಲಿ ಕಾರ್ಮಿಕ ಮನ್ಸೋರ್ ಅವರ ಪತ್ನಿ ಸೋನಿಯಾಗೆ ಪ್ರಸವದ ನೋವು ಕಾಣಿಕೊಂಡಿತ್ತು. ಪ್ರದೇಶ ಪೂರ್ತಿ ನೀರಿನಿಂದ ತುಂಬಿಕೊಂಡಿದ್ದರಿಂದ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೇ ಮನೆಯಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ನಂತರ ಹರಸಾಹಸ ಮಾಡಿ ತಾಯಿ ಮತ್ತು ಮಗುವನ್ನು ಕಿಲ್ಪಾಕ್ಕಂ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಆಸ್ಪತ್ರಗೆ ತಲುಪುವಷ್ಟರಲ್ಲಿ ಮಗು ಸಾವನ್ನಪ್ಪಿತ್ತು. ತಾಯಿಗೆ ಚಿಕಿತ್ಸೆ ಮುಂದುವರೆದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಮಗುವಿನ ಶವಕ್ಕೆ ಲಂಚ ಕೇಳಿದ ಆಸ್ಪತ್ರೆ ಸಿಬ್ಬಂದಿ: ಮಗುವನ್ನು ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ನಂತರ ಶವಾಗಾರಕ್ಕೆ ಕಳುಹಿಸಲಾಗಿತ್ತು. ಮಗುವನಿ ಮೃತ ದೇಹವನ್ನು ಕೇಳಲು ಹೋದಾಗ ತಂದೆಯ ಬಳಿ ಆಸ್ಪತ್ರೆ ಸಿಬ್ಬಂದಿ 2,500 ಲಂಚ ಕೇಳಿದ್ದಾರೆ. ಮಗುವಿನ ತಂದೆ ನಂತರ ಪುಲಿಯಾಂತೋಪ್ಪು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಪೊಲೀಸರ ಆದೇಶದ ಮೇರೆಗೆ ಮಗುವನ್ನು ಹಸ್ತಾಂತರಿಸಿದ್ದಾರೆ.