ಬೋಪಾಲ್ (ಮಧ್ಯಪ್ರದೇಶ): ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾದ 8 ಚೀತಾಗಳಲ್ಲಿ ಸಿಯಾಯಾ ಎಂಬ ಚೀತಾ ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. ಈ ಬಗ್ಗೆ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಬುಧವಾರ ತಮ್ಮ ಟ್ವಿಟ್ಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ‘ಅಮೃತ್ ಕಾಲ’ ಸಮಯದಲ್ಲಿ ಭಾರತದ ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲಿ ಮಹತ್ವದ ಘಟನೆ ನಡೆದಿದೆ ಎಂದು ಬಣ್ಣಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ 2022ರ ಸಪ್ಟೆಂಬರ್ 17 ರಂದು ಭಾರತಕ್ಕೆ ಸ್ಥಳಾಂತರಗೊಂಡ ಚೀತಾಗಳಲ್ಲಿ ಒಂದು ಚೀತಾಗೆ ನಾಲ್ಕು ಮರಿಗಳು ಜನಿಸಿದವು ಎಂದು ಹಂಚಿಕೊಳ್ಳಲು ನಾನು ಸಂತೋಷಪಡುತ್ತೇನೆ" ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ. ಜತೆಗೆ ಪ್ರಾಜೆಕ್ಟ್ ಚೀತಾದ ಸಂಪೂರ್ಣ ತಂಡವನ್ನು ಸಚಿವರು ಅಂಭಿನಂದಿಸಿದರು.
ಪಿಎಂ ಮೋದಿ ಜನ್ಮದಿನದಂದು ಬಂದಿದ್ದ ಎಂಟು ಚಿರತೆಗಳು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ 'ಚೀತಾ ಮರು ಪರಿಚಯ' ಎಂಬ ಯೋಜನೆ ಅಡಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಸೆಪ್ಟೆಂಬರ್ 17 ರಂದು ತಮ್ಮ 72ನೇ ಹುಟ್ಟುಹಬ್ಬದ ದಿನದಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದ ಕ್ವಾರೈಂಟನ್ ಆವರಣದಲ್ಲಿ ನಮೀಬಿಯಾದಿಂದ ತರಿಸಲಾದ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ಬಿಡುಗಡೆ ಮಾಡಿದ್ದರು. ನಂತರ, ಫೆಬ್ರವರಿ 18 ರಂದು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಕುನೋ ಉದ್ಯಾನವನಕ್ಕೆ ಸ್ಥಳಾಂತರಗೊಂಡಿದ್ದವು.
ಇದನ್ನೂ ಓದಿ:ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚೀತಾಗಳು.. ಮೋದಿಗೆ ಧನ್ಯವಾದ ತಿಳಿಸಿದ ಸಿಎಂ