ನವದೆಹಲಿ:ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಜುಲೈ 13ರಂದು ಮಧ್ಯಾಹ್ನ 2:30 ಕ್ಕೆ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಘೋಷಿಸಿದೆ. ಇದು ಲ್ಯಾಂಡರ್ ಮತ್ತು ರೋವರ್ ಮಾದರಿಯನ್ನು ಹೊಂದಿದೆ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿಯುವ ಮತ್ತು ರೋವರ್ ಸಂಚರಿಸುವ ಸಾಮರ್ಥ್ಯ ಪ್ರದರ್ಶಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹುನಿರೀಕ್ಷಿತ ಚಂದ್ರಯಾನ-3 ನೌಕೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III ಮೂಲಕ ಉಡಾವಣೆ ಮಾಡಲಾಗುವುದು. ಇದಕ್ಕಾಗಿ ಜುಲೈ 13ರಂದು ಮುಹೂರ್ತ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅತ್ಯಂತ ಸೂಕ್ಷ್ಮ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆಯನ್ನು ಇಳಿಸಲಾಗುವುದು. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು ಚಂದ್ರನ ಕಕ್ಷೆಯಲ್ಲಿ 100 ಕಿ.ಮೀವರೆಗೆ ಸಾಗಿಸುತ್ತದೆ. ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್ ರಿಗೊಲಿತ್, ಅಲ್ಲಿಯ ಭೂಕಂಪನ ಅಧ್ಯಯನ ಮಾಡುವ ಲೂನಾರ್ ಸೆಸಿಮಿಸಿಟಿ, ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಮುಂತಾದವುಗಳ ಅಧ್ಯಯನವನ್ನು ನಡೆಸಲಾಗುವುದು ಎಂದು ಇಸ್ರೋ ಹೇಳಿದೆ.
ಪ್ರೊಪಲ್ಷನ್ ಮಾಡ್ಯೂಲ್ ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು 100 ಕಿ.ಮೀ ಚಂದ್ರನ ಕಕ್ಷೆಯವರೆಗೆ ಸಾಗಿಸುತ್ತದೆ. ಇದು ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರಲ್ ಮತ್ತು ಪೋಲಾರಿಮೆಟ್ರಿಕ್ ಅಳತೆಗಳನ್ನು ಅಧ್ಯಯನ ಮಾಡಲು ವಾಸಯೋಗ್ಯ ಗ್ರಹ ಭೂಮಿಯ ಪೇಲೋಡ್‌ನ ಸ್ಪೆಕ್ಟ್ರೋ-ಪೋಲಾರಿಮೆಟ್ರಿಯನ್ನು ಹೊಂದಿದೆ.