ನವದೆಹಲಿ:ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನೂ ಪ್ರತಿವಾದಿಗಳನ್ನಾಗಿ ಮಾಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಹೊಸ ಅಫಿಡವಿಟ್ ಸಲ್ಲಿಸಿತು. ಈ ವಿಚಾರವಾಗಿ ರಾಜ್ಯಗಳೊಂದಿಗೆ ಸಮಾಲೋಚನೆ ಮಾಡುವ ಅಗತ್ಯವಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ಪ್ರಸ್ತುತ ಪ್ರಕರಣವು ಸಂವಿಧಾನದ 7ನೇ ಶೆಡ್ಯೂಲ್ ಅಡಿಯಲ್ಲಿ ರಾಜ್ಯಗಳ ಶಾಸಕಾಂಗ ಹಕ್ಕುಗಳು ಮತ್ತು ರಾಜ್ಯಗಳ ನಿವಾಸಿಗಳ ಹಕ್ಕುಗಳನ್ನು ಒಳಗೊಂಡಿರುತ್ತದೆ ಎಂದು ಜಂಟಿ ಕಾರ್ಯದರ್ಶಿ ಮತ್ತು ಶಾಸಕಾಂಗ ವಕೀಲ ಕೆ.ಆರ್.ಸಜಿ ಕುಮಾರ್ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಒಟ್ಟುಗೂಡಿಸಿರುವ ಸುಪ್ರೀಂ ಕೋರ್ಟ್ ಮಂಗಳವಾರದಿಂದ ಆ ಅರ್ಜಿಗಳ ವಿಚಾರಣೆ ಆರಂಭಿಸಿದೆ. ಮುಖ್ಯ ನಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆಗೆ ಕೇಂದ್ರ ಸರ್ಕಾರ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ.
ಅಫಿಡವಿಟ್ನಲ್ಲಿ ಏನಿದೆ?:ಕೇಂದ್ರದ ಅಫಿಡವಿಟ್ನಲ್ಲಿ ಏಕಕಾಲಿಕ ಪಟ್ಟಿಯ ನಮೂದು 5 ಅನ್ನು ಉಲ್ಲೇಖಿಸಲಾಗಿದೆ. ಮದುವೆ ಮತ್ತು ವಿಚ್ಛೇದನ, ಶಿಶುಗಳು ಮತ್ತು ಅಪ್ರಾಪ್ತ ವಯಸ್ಕರು, ದತ್ತು, ಉಯಿಲುಗಳು, ಉತ್ತರಾಧಿಕಾರ, ಅವಿಭಕ್ತ ಕುಟುಂಬ ಮತ್ತು ವಿಭಜನೆ ಹಾಗೂ ಅವರ ವೈಯಕ್ತಿಕ ಕಾನೂನಿಗೆ ಒಳಪಟ್ಟು ಈ ಸಂವಿಧಾನವು ಪ್ರಾರಂಭವಾಗುವ ಮೊದಲು ನ್ಯಾಯಾಂಗ ಪ್ರಕ್ರಿಯೆಯಲ್ಲಿದ್ದ ಅಂಶಗಳನ್ನು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.