ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ 80 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲು ಮುಂದಾಗಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಇಂದಿನಿಂದ (ಮೇ 1) ರಿಂದ ಮುಂದಿನ ಎರಡು ತಿಂಗಳು ಹೆಚ್ಚುವರಿ 5 ಕೆಜಿ ಆಹಾರ ಧಾನ್ಯಗಳನ್ನು ಪಡಿತರ ಅಥವಾ ನ್ಯಾಯಬೆಲೆ ಅಂಗಡಿಗಳ ಮೂಲಕ ನೀಡಲಾಗುವುದು.
ಕಳೆದ ವರ್ಷ ಲಾಕ್ಡೌನ್ ಜಾರಿಯಾದಾಗ ಪಿಎಂಜಿಕೆಎವೈ ಯೋಜನೆಯಿಂದಾಗಿ ಅನೇಕ ಬಡವರಿಗೆ ಸಹಾಯವಾಗಿದ್ದು, ಹಲವು ರಾಜ್ಯಗಳ ಕೋರಿಕೆಯ ಮೇರೆಗೆ ಈ ವರ್ಷವೂ ಈ ಯೋಜನೆಯನ್ನು ಮತ್ತೆ ಕಾರ್ಯರೂಪಕ್ಕೆ ತರಲು ಸರ್ಕಾರ ನಿರ್ಧರಿಸಿದೆ.