ನವದೆಹಲಿ: ನವೆಂಬರ್ 8 ಕ್ಕೆ ಈಗಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಯು ಯು ಲಲಿತ್ ಅವರ ಅಧಿಕಾರವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅವರಿಗೆ ಮುಂದಿನ ಸಿಜೆಐ ಹೆಸರು ಸೂಚಿಸುವಂತೆ ಮನವಿ ಮಾಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇಮಕಾತಿ ನಿಯಮದ ಪ್ರಕಾರ, ಮುಂದಿನ ಸಿಜೆಐ ಹೆಸರನ್ನು ಶಿಫಾರಸು ಮಾಡುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಲಲಿತ್ ಅವರು ನವೆಂಬರ್ 8 ರಂದು ನಿವೃತ್ತರಾಗಲಿದ್ದು, ಸಂಪ್ರದಾಯದಂತೆ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರನ್ನು ಹಿರಿತನದ ಪ್ರಕಾರ ಹುದ್ದೆಗೆ ಶಿಫಾರಸು ಮಾಡಬೇಕಿದೆ. ನ್ಯಾಯಮೂರ್ತಿ ಲಲಿತ್, ನ್ಯಾ ಡಿ.ವೈ. ಚಂದ್ರಚೂಡ್ ಅವರನ್ನು ಮುಂದಿನ ಸಿಜೆಐ ಎಂದು ಹೆಸರಿಸುವ ಸಾಧ್ಯತೆಯಿದೆ.
ನಿಯಮದ ಪ್ರಕಾರ ಸರ್ಕಾರ, ನಿರ್ಗಮಿತವಾಗಲಿರುವ ಮುಖ್ಯ ನ್ಯಾಯಮೂರ್ತಿಗಳಿಗೆ ಮುಂದಿನ ಸಿಜೆಐ ಹೆಸರು ಸೂಚಿಸುವಂತೆ ಪತ್ರ ಬರೆಯುತ್ತದೆ. ಇದಕ್ಕೆ ಪ್ರತಿಯಾಗಿ ನಿವೃತ್ತಿಯ ಒಂದು ತಿಂಗಳ ಮೊದಲು ಉತ್ತರಾಧಿಕಾರಿಯಾಗಿ ಅತ್ಯಂತ ಹಿರಿಯ ನ್ಯಾಯಾಧೀಶರ ಹೆಸರನ್ನು ಶಿಫಾರಸು ಮಾಡಲಾಗುತ್ತದೆ.
ಅಲ್ಲದೆ, ಮುಖ್ಯ ನ್ಯಾಯಮೂರ್ತಿ ಲಲಿತ್ ನೇತೃತ್ವದ ಕೊಲಿಜಿಯಂ ನಾಲ್ಕು ಖಾಲಿ ಇರುವ ಸುಪ್ರೀಂಕೋರ್ಟ್ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಸಾಧ್ಯವಾಗದಿರಬಹುದು. ಮೂಲಗಳ ಪ್ರಕಾರ ಐದು ಸದಸ್ಯರ ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲಿ ಇಬ್ಬರು ಸುಪ್ರೀಂ ಕೋರ್ಟ್ ವಕೀಲರನ್ನು ಒಳಗೊಂಡಿರುವ ನಾಲ್ಕು ಹೊಸ ನ್ಯಾಯಾಧೀಶರನ್ನು ಔಪಚಾರಿಕ ಸಭೆಯ ಬದಲಿಗೆ ಲಿಖಿತ ಟಿಪ್ಪಣಿಯ ಮೂಲಕ ಉನ್ನತ ನ್ಯಾಯಾಲಯಕ್ಕೆ ಶಿಫಾರಸು ಮಾಡುವ ಪ್ರಸ್ತಾಪ ವಿರೋಧಿಸಿದ್ದಾರೆ.
ಇದನ್ನು ಓದಿ:ಸಾಧುಗಳ ಮೇಲೆ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ