ನವದೆಹಲಿ/ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆ ತೆಹ್ರೀಕ್ -ಇ-ಹುರಿಯತ್ (ಟಿಇಹೆಚ್)ಅನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿದೆ. ಕಣಿವೆ ನಾಡಿನಲ್ಲಿ 2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕೇಂದ್ರ ನಿಷೇಧ ಹೇರಿದ ಐದನೇ ಸಂಘಟನೆ ಇದಾಗಿದೆ.
2004ರಲ್ಲಿ ಪ್ರತ್ಯೇಕತಾವಾದಿ ಸೈಯದ್ ಅಲಿ ಗಿಲಾನಿ ಈ ತೆಹ್ರೀಕ್-ಇ-ಹುರಿಯತ್ ಸಂಘಟನೆಯನ್ನು ಸ್ಥಾಪಿಸಿದ್ದರು. 2020ರ ಸೆಪ್ಟೆಂಬರ್ನಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಗಿಲಾನಿ ತಮ್ಮ ಮನೆಯಲ್ಲೇ ಮೃತಪಟ್ಟಿದ್ದರು. ಇದೀಗ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿ ಈ ಸಂಘಟನೆ ಮೇಲೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದಾರೆ.
''ತೆಹ್ರೀಕ್ -ಇ-ಹುರಿಯತ್ (ಟಿಇಹೆಚ್)ಅನ್ನು ಯುಎಪಿಎ ಅಡಿಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. ಇದು ಭಾರತದಿಂದ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕಿಸಲು ಮತ್ತು ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ನಿಷೇಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿತ್ತು'' ಎಂದು ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂದುವರೆದು, ''ಈ ಗುಂಪು ಭಾರತ-ವಿರೋಧಿ ಪ್ರಚಾರವನ್ನು ಹರಡುತ್ತಿದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದವನ್ನು ಉತ್ತೇಜಿಸಲು ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರೆಸಿತ್ತು. ಭಯೋತ್ಪಾದನೆ ವಿರುದ್ಧದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶೂನ್ಯ ಸಹಿಷ್ಣುತೆಯ ನೀತಿಯ ಅಡಿಯಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಯನ್ನು ತಕ್ಷಣವೇ ನಿಯಂತ್ರಿಸಲಾಗುವುದು'' ಎಂದು ಗೃಹ ಸಚಿವರು ಬರೆದುಕೊಂಡಿದ್ದಾರೆ.
ನಿಷೇಧಕ್ಕೊಳಗಾದ ಐದನೇ ಸಂಘಟನೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರವು 2019ರಿಂದ ನಿಷೇಧ ಹೇರಿದ ಐದನೇ ಸಂಘಟನೆ ತೆಹ್ರೀಕ್ -ಇ-ಹುರಿಯತ್ ಆಗಿದೆ. ಅಲ್ಲದೇ, ಭಾರತ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಈಗಾಗಲೇ ಹತ್ತಾರು ಪ್ರತ್ಯೇಕತಾವಾದಿ ನಾಯಕರನ್ನು ತಿಹಾರ್ ಮತ್ತು ಇತರ ಜೈಲುಗಳಲ್ಲಿ ಇರಿಸಲಾಗಿದೆ.
ಸದ್ಯ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ನೇತೃತ್ವದ ಪ್ರತ್ಯೇಕತಾವಾದಿ ಗುಂಪಾಗಿದ್ದ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್, ಸಾಮಾಜಿಕ-ರಾಜಕೀಯ ಸಂಘಟನೆಯಾಗಿದ್ದ ಜಮಾತ್-ಎ-ಇಸ್ಲಾಮಿ, ಜೈಲಿನಲ್ಲಿರುವ ಮತ್ತೊಬ್ಬ ಪ್ರತ್ಯೇಕತಾವಾದಿ ಮಸರತ್ ಆಲಂ ನೇತೃತ್ವದ ಮುಸ್ಲಿಂ ಲೀಗ್ ಮತ್ತು ಶಬೀರ್ ಶಾ ನೇತೃತ್ವದ ಡೆಮಾಕ್ರಟಿಕ್ ಫ್ರೀಡಂ ಪಕ್ಷದ ಮೇಲೆ ಈ ಹಿಂದೆಯೇ ಕೇಂದ್ರ ಸರ್ಕಾರ ನಿಷೇಧ ವಿಧಿಸಿದೆ.
ಇದನ್ನೂ ಓದಿ:ಉತ್ತರಾಖಂಡದಲ್ಲಿ ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿ: ಸಿಎಂ ಧಾಮಿ