ಹೈದರಾಬಾದ್(ತೆಲಂಗಾಣ):ದೆಹಲಿ ಅಬಕಾರಿ ಹಗರಣದಲ್ಲಿ ಹೆಸರು ಕೇಳಿಬಂದಿರುವ ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ, ಎಂಎಲ್‌ಸಿ ಕೆ ಕವಿತಾ ಅವರನ್ನು ಇಂದು ಕೇಂದ್ರೀಯ ತನಿಖಾ ದಳ(ಸಿಬಿಐ) ವಿಚಾರಣೆ ನಡೆಸಲಿದೆ. ಬಂಜಾರ ಹಿಲ್ಸ್ನಲ್ಲಿರುವ ಅವರ ನಿವಾಸದ ಸುತ್ತಲೂ ಬಿಗಿ ಭದ್ರತೆ ನೀಡಲಾಗಿದ್ದು, ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಮನೆಯ ಸಮೀಪಕ್ಕೆ ತೆರಳದಂತೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚಿಸಲಾಗಿದೆ.
ಮದ್ಯ ಹಗರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಬಿಐ ಡಿಸೆಂಬರ್ 6 ರಂದು ಕವಿತಾ ಅವರಿಗೆ ನೋಟಿಸ್ ನೀಡಿತ್ತು. ಆದರೆ, ಪೂರ್ವನಿಮಿತ್ತ ಕಾರ್ಯಕ್ರಮದ ಕಾರಣ ಅವರು ಡಿಸೆಂಬರ್ 11 ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಒಳಪಡುವುದಾಗಿ ಕೋರಿದ್ದರು. ಇದನ್ನು ಮನ್ನಿಸಿದ್ದ ಸಿಬಿಐ ಇಂದು ಅವರ ನಿವಾಸದಲ್ಲೇ ವಿಚಾರಣೆ ನಡೆಸಲಿದೆ.
ಹೋರಾಟಗಾರನ ಮಗಳೆಂದು ಬ್ಯಾನರ್:ವಿಚಾರಣೆಗೆ ಒಳಗಾಗುವ ಮೊದಲು ಕವಿತಾ ಅವರ ನಿವಾಸಲಿರುವ ಪ್ರದೇಶ ಸೇರಿದಂತೆ ನಗರದ ಹಲವೆಡೆ ಬ್ಯಾನರ್ಗಳು ರಾರಾಜಿಸುತ್ತಿವೆ. "ಹೋರಾಟಗಾರನ ಮಗಳು ಎಂದಿಗೂ ಹೆದರುವುದಿಲ್ಲ" ಎಂಬ ಘೋಷವಾಕ್ಯದ ಬ್ಯಾನರ್ಗಳನ್ನು ಕಾರ್ಯಕರ್ತರು ಅಳವಡಿಸಿದ್ದಾರೆ. ಅಲ್ಲದೇ, 'ಕವಿತಕ್ಕನ ಜೊತೆ ನಾವಿದ್ದೇವೆ’ ಎಂಬ ಪೋಸ್ಟರ್‌ಗಳನ್ನೂ ಅಂಟಿಸಲಾಗಿದೆ.