ನಾಗಪಟ್ಟಣಂ (ತಮಿಳುನಾಡು) : ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿಯುವಂತೆ ಕಾಣುತ್ತಿಲ್ಲ. ಇಂದು ತಮಿಳುನಾಡಿನ 8 ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ನಾಗಪಟ್ಟಣಂ ಜಿಲ್ಲೆಯಲ್ಲಿ ಸುಮಾರು 12,000 ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಬಂದ್ ಮಾಡಿರುವ ವ್ಯಾಪಾರಿಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕುರುವಾಯಿ ಭತ್ತದ ಕೃಷಿ ಉಳಿಸಲು ಮತ್ತು ಸಾಂಬಾ ಕೃಷಿ ಪ್ರಾರಂಭಿಸಲು ಕರ್ನಾಟಕ ಸರ್ಕಾರವು ಕಾವೇರಿ ನೀರನ್ನು ಸಮರ್ಪಕವಾಗಿ ಬಿಡುವಂತೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿ ಕಾವೇರಿ ಡೆಲ್ಟಾ ಸಂರಕ್ಷಣಾ ಆಂದೋಲನ ಮತ್ತು ರೈತ ಸಂಘಗಳು ಜಂಟಿಯಾಗಿ ಇಂದು ಡೆಲ್ಟಾ ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಿವೆ. ತಮಿಳುನಾಡಿನ ತಿರುಚ್ಚಿ0, ತಂಜೂರು, ನಾಗಪಟ್ಟಣಂ ಮತ್ತು ತಿರುವಾರೂರ್ ಸೇರಿದಂತೆ 8 ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯಿಂದ ಪ್ರತಿಭಟನೆ ಪ್ರಾರಂಭಿಸಲಾಗಿದ್ದು, ನಾಳೆಯ ವರೆಗೂ ಮುಂದುವರೆಯಲಿದೆ.
ಇನ್ನೊಂದೆಡೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಕರ್ನಾಟಕವು ನೀರು ಬಿಡುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಬೇಕು ಎಂಬ ನಿರ್ಣಯವನ್ನು ತಮಿಳುನಾಡಿನ ವಿಧಾನಸಭೆಯಲ್ಲಿ ಸೋಮವಾರ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 15 ರ ನಡುವೆ ಬಿಳಿಗುಂಡ್ಲುವಿಗೆ 3,000 ಕ್ಯೂಸೆಕ್ ನೀರು ಬಿಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಆದೇಶಿಸಿದೆ. ಆದರೆ, ರಾಜ್ಯದ ಕೆಲವು ಭಾಗಗಳಲ್ಲಿ ಭೀಕರ ಬರಗಾಲ ಇರುವುದನ್ನು ಉಲ್ಲೇಖಿಸಿ, ತಮಿಳುನಾಡಿಗೆ ನೀರು ಬಿಡುವ ಕಾವೇರಿ ಮಂಡಳಿಯ ಆದೇಶಗಳನ್ನು ಅನುಸರಿಸಲು ಕರ್ನಾಟಕ ಸರ್ಕಾರ ನಿರಾಕರಿಸಿದೆ.