ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ನವದೆಹಲಿ/ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರವಾಗಿ ದೆಹಲಿಯಲ್ಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ದ ಕೇಂದ್ರ ಕಚೇರಿಯಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ಮುಕ್ತಾಯಗೊಂಡಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಮತ್ತೊಮ್ಮೆ ಹೇಳಿದೆ.
ಈ ಮೊದಲು ಬಾಕಿ ಇರುವ 12,500 ಕ್ಯೂಸೆಕ್ ನೀರು ಬಿಡಬೇಕು ಎಂಬ ತಮಿಳುನಾಡು ಬೇಡಿಕೆಯನ್ನು ಕರ್ನಾಟಕದ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. 3,000 ಕ್ಯೂಸೆಕ್ ನೀರು ಕೂಡ ಬಿಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ 12,500 ಕ್ಯೂಸೆಕ್ ನೀರಿನ ಬೇಡಿಕೆಯ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ ಎಂದು ಕರ್ನಾಟಕ ತಿಳಿಸಿದೆ.
ಮತ್ತೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಇಂದು ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಭೆ ನಡೆದಿದೆ. ನಾವು ನಮ್ಮ ಎಲ್ಲ ಸಂಗತಿಗಳನ್ನು ಸಲ್ಲಿಸಿದ್ದೇವೆ. ನಾನು ಇಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ಸಭೆ ನಡೆಸುತ್ತೇನೆ. ಈ ವಿಚಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಕುರಿತು ನಾನು ನಮ್ಮ ಕಾನೂನು ತಂಡದೊಂದಿಗೆ ಸಮಲೋಚನೆ ಮಾಡುತ್ತೇನೆ. ಇದರ ನಂತರ ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:'ಕಾವೇರಿ'ದ ಬಂದ್: ಸ್ಯಾಂಡಲ್ವುಡ್ ನಟ-ನಟಿಯರಿಂದ ಪ್ರತಿಭಟನೆ... ಶಿವಣ್ಣ, ಉಪೇಂದ್ರ, ದರ್ಶನ್, ಶ್ರೀನಾಥ್ ಸೇರಿ ಹಲವರು ಭಾಗಿ
ಸಿಡಬ್ಲ್ಯುಎಂಎ ಸಭೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಸಿಎಂ, ಆದೇಶ ಏನು ಬಂದಿದೆ ಅಂತಾ ಗೊತ್ತಿಲ್ಲ ಎಂದು ಹೇಳಿದರು. ಇದೇ ವೇಳೆ, ಕರ್ನಾಟಕ ಬಂದ್ ವಿಚಾರವಾಗಿ ಮಾತನಾಡಿ, ಪ್ರತಿಭಟನೆ ಮಾಡಲು ನಮ್ಮ ತೊಂದರೆ ಇಲ್ಲ. ಆದರೆ, ಬಂದ್ ಮಾಡಲು ಅವಕಾಶ ಇಲ್ಲ. ನಾವೂ ಕೂಡಾ ಬಂದ್ ಹಾಗೂ ಮೆರವಣಿಗೆ ಮಾಡಬೇಡಿ ಅಂದಿದ್ದೇವೆ. ಆದರೂ, ಬಂದ್ಗೆ ಕರೆ ನೀಡಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ಇದೆ. ಬೇರೆಲ್ಲೂ ಅವಕಾಶ ಇಲ್ಲ ಎಂದರು.
ಸಿಂಗಾಪುರಕ್ಕೆ ಅಕ್ಕಿ.. ರಾಜ್ಯಕ್ಕಿಲ್ಲ- ಸಿಎಂ ಗರಂ:ಇದೇ ಸಂದರ್ಭದಲ್ಲಿ ಪಡಿತರ ಅಕ್ಕಿ ಪೂರೈಕೆ ವಿಚಾರ ಪ್ರತಿಕ್ರಿಯಿಸಿ,ಸಿಂಗಾಪುರಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿರುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಅಕ್ಕಿ ಇಟ್ಕೊಂಡು ನಮಗೆ ಕೊಡಲಿಲ್ಲ. ಬಡವರಿಗೆ ಅಕ್ಕಿ ಕೊಡಲಿಲ್ಲ. ಪುಕ್ಕಟೆ ಕೊಡಿ ಅಂತಾ ನಾವು ಕೇಳಿಲ್ಲ. ನಾವು ದುಡ್ಡು ಕೊಡುತ್ತೇವೆ.. ಕೊಡಿ ಅಂದ್ರೂ ಕೊಡ್ಲಿಲ್ಲ. ಅಕ್ಕಿ ಕೊಡ್ತೀವಿ ಅಂತ ಒಪ್ಪಿಕೊಂಡು ನಂತರ ಕೊಡಲಿಲ್ಲ. ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಬಡವರ ಕಾರ್ಯಕ್ರಮಕ್ಕೆ ಅಕ್ಕಿ ಕೊಡಲು ಬಿಜೆಪಿಗೆ ಆಸಕ್ತಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಇದನ್ನೂ ಓದಿ:ಸಂಕಷ್ಟ ಕಾಲದಲ್ಲಿ ಕಾವೇರಿ ನೀರು ಹರಿಸುವ ಹೊಸ ಸೂತ್ರಕ್ಕೆ ಡಿಕೆಶಿ ಆಗ್ರಹ