ಹೈದರಾಬಾದ್:ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರ ಬಂಧನ ವಿರೋಧಿಸಿ ಹೈದರಾಬಾದ್‌ನಲ್ಲಿ ಐಟಿ ಉದ್ಯೋಗಿಗಳು ಬೃಹತ್ ಕಾರ್ ರ್ಯಾಲಿಯನ್ನು ಶನಿವಾರ ನಡೆಸಿದರು. ಹೈದರಾಬಾದ್- ಮುಂಬೈ ಮಾರ್ಗದ ಹೊರ ವರ್ತುಲ ರಸ್ತೆಯಲ್ಲಿ ಪೊಲೀಸರು ತಡೆದ ಹಿನ್ನೆಲೆಯಲ್ಲಿ ವಾಗ್ವಾದ ನಡೆದಿದೆ. ಈ ವೇಳೆ 9 ಮಂದಿಯನ್ನು ಬಂಧಿಸಲಾಗಿದೆ.
ನಾಯ್ಡು ಬೆಂಬಲಿಸಿ ನಡೆಸಲು ಉದ್ದೇಶಿಸಿದ್ದ ಐಟಿ ಉದ್ಯೋಗಿಗಳ ಕಾರು ರ್ಯಾಲಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಹೀಗಾಗಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ಒಂದೇ ಬಾರಿಗೆ ರ್ಯಾಲಿ ನಡೆಸುವ ಬದಲಿಗೆ ಗುಂಪುಗಳಾಗಿ ವಿಂಗಡಣೆಯಾಗಿ ರ್ಯಾಲಿ ನಡೆಸಲಾಯಿತು. ನಾನಕ್ರಮ್‌ಗುಡದ ಹೊರ ವರ್ತುಲ ರಸ್ತೆ ಜಂಕ್ಷನ್‌ನಿಂದ ರ್ಯಾಲಿ ಆರಂಭಿಸಲಾಯಿತು.
ಅನುಮತಿಯಿಲ್ಲದೇ, ರ್ಯಾಲಿ ಆರಂಭಿಸಿದ ಕಾರಣ ಪ್ರತಿ ಕಾರನ್ನು ಪರಿಶೀಲಿಸಿದ ನಂತರ ಪೊಲೀಸರು ವಾಹನಗಳಿಗೆ ಅನುಮತಿ ನೀಡಿದರು. ನಗರದ ವಿವಿಧೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಇದರಿಂದ ಹೈದರಾಬಾದ್-ಮುಂಬೈ ಮಾರ್ಗದ ಹೊರ ವರ್ತುಲ ರಸ್ತೆಯಲ್ಲಿ ರ‍್ಯಾಲಿಗೆ ಪೊಲೀಸರು ಅಡ್ಡಿಪಡಿಸಿದರು. ಈ ವೇಳೆ ಉದ್ಯೋಗಿಗಳು ಮತ್ತು ಪೊಲೀಸರ ಮಧ್ಯೆ ವಾಗ್ವಾದ ಉಂಟಾಯಿತು. ಶಾಂತಿಯುತ ರ್ಯಾಲಿಗೆ ಏಕೆ ಅಡ್ಡಿಪಡಿಸುತ್ತೀರಿ ಎಂದು ಐಟಿ ಉದ್ಯೋಗಿಗಳು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಬಂಧಿತ ಮಾಜಿ ಸಿಎಂ ಚಂದ್ರಬಾಬು ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಘೋಷಣೆ ಕೂಗಿದರು.
ಇತ್ತ ಚಂದ್ರಬಾಬು ಅಭಿಮಾನಿಗಳು ಹೈದರಾಬಾದ್ ನಗರದಲ್ಲಿ ಬೃಹತ್ ಕಾರು ರ್ಯಾಲಿ ನಡೆಸಿದರು. ಕುಕಟ್‌ಪಲ್ಲಿಯಲ್ಲಿ ಅವರ ಅಭಿಮಾನಿಗಳು ಸೇರಿ ಬಳಿಕ ಮಿಥಿಲಾನಗರದಿಂದ ಅಂಬೀರ ಕೆರೆಗೆ ರ್ಯಾಲಿ ತೆರಳಿದರು. ಆಂಧ್ರಪ್ರದೇಶದಲ್ಲಿ ‘ಸೈಕೋ ಹೋಗಬೇಕು ಸೈಕಲ್ ಬರಬೇಕು’ ಎಂಬ ಘೋಷಣೆಗಳನ್ನೂ ಮೊಳಗಿಸಿದರು.
9 ಮಂದಿ ಬಂಧನ:ಕಾರು ರ್ಯಾಲಿ ನಡೆಸುತ್ತಿದ್ದ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರ ಮಧ್ಯೆ ನಡೆದ ಮಾತಿನ ಚಕಮಕಿಯಲ್ಲಿ ಪಠಾಂಚೇರು ಪ್ರದೇಶದಲ್ಲಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಮೆರಿಕದಲ್ಲಿ ಎನ್‌ಆರ್‌ಐಗಳ ಪ್ರತಿಭಟನೆ:ಚಂದ್ರಬಾಬು ನಾಯ್ಡು ಅವರನ್ನು ಅಕ್ರಮ ಬಂಧಿಸಿದ್ದನ್ನು ವಿರೋಧಿಸಿ ಅಮೆರಿಕದಲ್ಲಿರುವ ತೆಲುಗು ಜನರು ಶನಿವಾರ ಪ್ರತಿಭಟನೆ ನಡೆಸಿದರು. ನ್ಯೂಜೆರ್ಸಿಯಲ್ಲಿ ಚಂದ್ರಬಾಬು ಅವರನ್ನು ಬೆಂಬಲಿಸಿ ದೊಡ್ಡ ಮಟ್ಟದ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ತೆಲುಗು ದೇಶಂ- ಜನಸೇನಾ ಧ್ವಜಗಳನ್ನು ಹಿಡಿದು ಅಮೆರಿಕದ ಬೀದಿಗಳಲ್ಲಿ ಜನರು ಮೆರವಣಿಗೆ ಸಾಗಿದರು. ಮುಖ್ಯಮಂತ್ರಿಯಾಗಿ ಚಂದ್ರಬಾಬು ಅವರು ಮಾಡಿದ ಶೈಕ್ಷಣಿಕ ಪ್ರಗತಿಯೇ ವಿದೇಶದಲ್ಲಿ ತಾವುಗಳು ನೆಲೆಯೂರಲು ಕಾರಣ ಎಂದು ಅನಿವಾಸಿಗಳು ಪ್ರತಿಭಟನೆಯ ವೇಳೆ ಹೇಳಿದರು. ಚಂದ್ರಬಾಬು ಅವರನ್ನು ಬಿಡುಗಡೆ ಮಾಡಬೇಕು, ಆಂಧ್ರಪ್ರದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಿ ಎಂಬ ಘೋಷಣೆಗಳೊಂದಿಗೆ ನ್ಯೂಜೆರ್ಸಿಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಇದನ್ನೂ ಓದಿ:ಬೆಂಗಳೂರು: ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಕಮ್ಮವಾರಿ ಯುವ ಬ್ರಿಗೇಡ್ನಿಂದ ಭಾರಿ ಪ್ರತಿಭಟನೆ