ನವದೆಹಲಿ:ದೇಶದರಾಜಧಾನಿಯ ರಸ್ತೆಗಳಲ್ಲಿ ಅಪಘಾತಗಳು ಸಾಮಾನ್ಯವೆಂಬಂತಾಗಿದೆ. ವಾಹನ ಸವಾರರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆಗಳನ್ನು ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತಿದ್ದರೂ ಇಂತಹ ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಕನ್ನಾಟ್ ಪ್ಲೇಸ್ ಪ್ರದೇಶದಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾರಿಕೇಡ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ಗೆ ರಾತ್ರಿ ವೇಳೆ ಕಾರು ಡಿಕ್ಕಿ ಹೊಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗಾಯಗೊಂಡವರು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಎಂದು ತಿಳಿದುಬಂದಿದೆ.ಕಾನ್ಸ್ಟೇಬಲ್ ಕನ್ನಾಟ್ ಪ್ಲೇಸ್‌ನ ಹೊರ ವೃತ್ತದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಎಸ್ಯುವಿ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಲ್ಲೇ ಇದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ಕಾರು ಹಿಂಬಾಲಿಸಿದ್ದಾರೆ. ಸ್ವಲ್ಪ ದೂರದವರೆಗೆ ಕಾರು ಹಿಂಬಾಲಿಸಿದ್ದ ಪೊಲೀಸ್ ಸಿಬ್ಬಂದಿ ಆರೋಪಿ ಚಾಲಕನನ್ನು ಬಂಧಿಸಿದರು. ಅಕ್ಟೋಬರ್ 24ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದೀಗ ಘಟನೆಯ ದೃಶ್ಯಾವಳಿ ಹೊರಬಿದ್ದಿದೆ. ವಿಡಿಯೋದಲ್ಲಿ ಕಾರು ಕಾನ್ಸ್ಟೇಬಲ್ಗೆ ಡಿಕ್ಕಿ ಹೊಡೆಯುತ್ತಿರುವುದನ್ನು ನೋಡಬಹುದು. ಕಾನ್ಸ್ಟೇಬಲ್ ಬ್ಯಾರಿಕೇಡ್ ಜೊತೆಗೆ ಕೆಲ ಅಡಿಗಳಷ್ಟು ದೂರದಷ್ಟು ಹಾರಿ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯರ ನೆರವಿನಿಂದ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು.