ನವದೆಹಲಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಚಾರಿಸಿದ್ದಾರೆ. ಪಂತ್ ಅವರ ತಾಯಿಯೊಂದಿಗೆ ಪ್ರಧಾನಿ ಮಾತನಾಡಿ ಆರೋಗ್ಯದ ಕುರಿತು ಮಾಹಿತಿ ಪಡೆದಿದ್ದಾರೆ.
ಇಂದು ಬೆಳಗ್ಗೆ ಉತ್ತರಾಖಂಡನ ರೂರ್ಕಿ ಗಡಿ ಬಳಿ ದೆಹಲಿ ಮತ್ತು ಡೆಹ್ರಾಡೂನ್ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಕ್ರಿಕೆಟಿಗ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಪ್ರಧಾನಿ ಟ್ವೀಟ್ ಮಾಡಿ, ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ ಅವರ ಅಪಘಾತದಿಂದ ನೊಂದಿದ್ದೇನೆ. ಅವರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದರು. ಇದೀಗ ಪಂತ್ ತಾಯಿ ಅವರೊಂದಿಗೆ ಪ್ರಧಾನಿ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ.
ಪಂತ್ ಆರೋಗ್ಯದ ಬಗ್ಗೆ ಬಿಸಿಸಿಐ ಹೇಳಿಕೆ: ಪ್ರತಿಭಾವಂತ ಕ್ರಿಕೆಟಿಗ ರಿಷಭ್ ಪಂತ್ ಬೇಗ ಚೇತರಿಕೆಯಾಗಿ ಕ್ರಿಕೆಟ್ ಜಗತ್ತಿನ ಪ್ರಮುಖರು ಹಾರೈಸಿದ್ದಾರೆ. ಅಲ್ಲದೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಹ ಪಂತ್ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಪಂತ್ ಅವರಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಆರೈಕೆ ಮತ್ತು ಈ ಆಘಾತಕಾರಿ ಸಮಯದಿಂದ ಹೊರಬರಲು ಅಗತ್ಯವಿರುವ ಎಲ್ಲ ಸಹಕಾರವನ್ನು ಅವರಿಗೆ ಮಂಡಳಿ ನೀಡಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಇದನ್ನೂ ಓದಿ:ಕಾರಿನ ಕಿಟಕಿ ಒಡೆದು ಜೀವ ಉಳಿಸಿಕೊಂಡ ಪಂತ್: ಹೊತ್ತಿ ಉರಿದ ಬಿಎಂಡಬ್ಲ್ಯು ಕಾರು
ಪ್ರಸ್ತುತ ರಿಷಭ್ ಪಂತ್ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ವೈದ್ಯಕೀಯ ತಂಡ ನಿಕಟ ಸಂಪರ್ಕದಲ್ಲಿದ್ದು, ಅವರ ಕುಟುಂಬದೊಂದಿಗೂ ಸಹ ಬಿಸಿಸಿಐ ನಿರಂತರ ಸಂಪರ್ಕದಲ್ಲಿದೆ ಎಂದು ಜಯ್ ಶಾ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಟ್ವೀಟ್ ಮಾಡಿದ್ದು, ನನ್ನ ಪ್ರಾರ್ಥನೆಯು ಪಂತ್ ಜೊತೆಯಲ್ಲಿದೆ. ಅವರು ಚೇತರಿಕೆಯ ಹಾದಿಯಲ್ಲಿ ಹೋರಾಡುತ್ತಿದ್ದಾರೆ. ನಾವು ಅವರಿಗೆ ಅಗತ್ಯವಿರುವ ಎಲ್ಲ ನೆರವು ನೀಡುತ್ತೇವೆ ಎಂದು ಹೇಳಿದ್ದಾರೆ.
ಅಪಘಾತದಲ್ಲಿ ಪಂತ್ಗೆ ಆಗಿರುವುದೇನು?: ರಸ್ತೆ ಅಪಘಾತದಲ್ಲಿ ರಿಷಭ್ ಪಂತ್ಗೆ ಆಗಿರುವ ಗಾಯಗಳ ಬಗ್ಗೆಯೂ ಬಿಸಿಸಿಐ ಮಾಹಿತಿ ನೀಡಿದೆ. ಪಂತ್ ಅವರ ಹಣೆಯ ಮೇಲೆ ಎರಡು ಗಾಯಗಳಾಗಿವೆ. ಜೊತೆಗೆ ಬಲ ಮೊಣಕಾಲಿಗೆ ಪೆಟ್ಟು ಬಿದ್ದಿದೆ (ligament tear in his right knee). ಬಲಗೈನ ಮಣಿಕಟ್ಟು, ಪಾದ, ಕಾಲಿನ ಬೆರಳು ಹಾಗು ಬೆನ್ನಿನ ಮೇಲೆ ಸವೆತದ ಗಾಯಗಳಾಗಿವೆ ಎಂದು ಬಿಸಿಸಿಐ ಮಾಹಿತಿ ಹಂಚಿಕೊಂಡಿದೆ.