ನವದೆಹಲಿ: ತಮ್ಮ ಐಫೋನ್‌ಗಳ ಹ್ಯಾಕ್ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಇತರ ಪ್ರತಿಪಕ್ಷಗಳ ಸಂಸದರು ಹಾಗೂ ನಾಯಕರ ಆರೋಪ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಐಫೋನ್ ತಯಾರಕ ಆ್ಯಪಲ್ ಪ್ರತಿಕ್ರಿಯಿಸಿದೆ. ''ಯಾವುದೇ ನಿರ್ದಿಷ್ಟ ರಾಜ್ಯ ಪ್ರಾಯೋಜಿತ ದಾಳಿಕೋರರ ಬಗ್ಗೆ ಎಚ್ಚರಿಕೆಯ ಸೂಚನೆಯನ್ನು ಆ್ಯಪಲ್ ನೀಡುವುದಿಲ್ಲ'' ಎಂದು ಹೇಳಿದೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಉದ್ಧವ್ ಠಾಕ್ರೆ ಬಣದ ಶಿವಸೇನೆಯ ರಾಜ್ಯಸಭೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಸೇರಿ ಇತರರು ಇಂದು ಬೆಳಿಗ್ಗೆ ರಾಜ್ಯ ಪ್ರಾಯೋಜಿತ ದಾಳಿಕೋರರು ತಮ್ಮ ಐಫೋನ್‌ಗಳ ಹ್ಯಾಕ್ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ, ಆ್ಯಪಲ್ ಸಂಸ್ಥೆಯಿಂದ ಸ್ವೀಕರಿಸಿದ ಎಚ್ಚರಿಕೆ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ಆ್ಯಪಲ್ ಹೇಳಿಕೆ ಬಿಡುಗಡೆ ಮಾಡಿ, ''ನಿರ್ದಿಷ್ಟ ರಾಜ್ಯ ಪ್ರಾಯೋಜಿತ ದಾಳಿಕೋರರ ಬಗ್ಗೆ ಆ್ಯಪಲ್ ಎಚ್ಚರಿಕೆಯ ಸೂಚನೆ ನೀಡುವುದಿಲ್ಲ'' ಎಂದು ತಿಳಿಸಿದೆ.
ಅದಾನಿ ಪ್ರಕರಣದ ಹಿನ್ನೆಲೆಯಲ್ಲಿ ಗೂಢಾಚಾರಿಕೆ- ರಾಹುಲ್ ಗಾಂಧಿ ಆರೋಪ:ಮತ್ತೊಂದೆಡೆ, ಸಂಸದರು ಹಾಗೂ ನಾಯಕರಿಗೆ ಆ್ಯಪಲ್ ಎಚ್ಚರಿಕೆ ಸಂದೇಶ ರವಾನಿಸಿದ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿದರು. ''ಉದ್ಯಮಿ ಅದಾನಿ ವಿಷಯವನ್ನು ಮುಟ್ಟಿದ ಕೂಡಲೇ ಪ್ರತಿಪಕ್ಷಗಳ ನಾಯಕರ ಮೇಲೆ ತನಿಖಾ ಸಂಸ್ಥೆಗಳಿಂದ ಗೂಢಾಚಾರಿಕೆ ನಡೆಯುತ್ತಿದೆ'' ಎಂದು ಆರೋಪಿಸಿದರು.
''ನಾವು ಹೆದರುವುದಿಲ್ಲ. ನೀವು ಎಷ್ಟು ಬೇಕಾದರೂ (ಫೋನ್) ಟ್ಯಾಪಿಂಗ್ ಮಾಡಬಹುದು. ನನ್ನ ಫೋನ್ ಬೇಕಾದರೆ, ನಿಮಗೆ ಕೊಡುತ್ತೇನೆ. ಈ ಹಿಂದೆ ನಂ.1 ಪ್ರಧಾನಿ ಮೋದಿ, ನಂ.2 ಅದಾನಿ ಹಾಗೂ ನಂ.3 ಅಮಿತ್ ಶಾ ಎಂದು ನಾನು ಭಾವಿಸಿದ್ದೆ. ಆದರೆ, ಅದು ಹಾಗಲ್ಲ. ನಂ.1 ಅದಾನಿ, ನಂ.2 ಪ್ರಧಾನಿ ಮೋದಿ ಮತ್ತು ನಂ.3 ಅಮಿತ್ ಶಾ ಆಗಿದ್ದಾರೆ. ನರೇಂದ್ರ ಮೋದಿಯವರ ಆತ್ಮ ಅದಾನಿ ಬಳಿ ಇದೆ. ಸತ್ಯವೆಂದರೆ ಅಧಿಕಾರ ಬೇರೆಯವರ ಕೈಯಲ್ಲಿದೆ. ಅದಾನಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಅವರನ್ನು ಸುತ್ತುವರೆದಿದ್ದೇವೆ'' ಎಂದರು.
ತನಿಖೆಗೆ ಒಳಪಡಲು ಆ್ಯಪಲ್ಗೆ ಸೂಚನೆ-ಐಟಿ ಸಚಿವ:ಇದೇ ವಿಷಯವಾಗಿ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸಿ,''ಭಾರತ ಸರ್ಕಾರ ಎಲ್ಲ ನಾಗರಿಕರ ಗೌಪ್ಯತೆ ಮತ್ತು ಭದ್ರತೆಯನ್ನು ರಕ್ಷಿಸುವ ತನ್ನ ಪಾತ್ರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ.ಆಪಾದಿತ ದಾಳಿಗಳ ಕುರಿತು ನೈಜ, ನಿಖರ ಮಾಹಿತಿಯೊಂದಿಗೆ ತನಿಖೆಗೆ ಆ್ಯಪಲ್ ಸಂಸ್ಥೆಗೆ ಸೂಚಿಸಿದ್ದೇವೆ'' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ಧಾರೆ.
ಇದನ್ನೂ ಓದಿ:'ನಮ್ಮ ಐಫೋನ್‌ಗಳ ಮೇಲೆ ರಾಜ್ಯ ಪ್ರಾಯೋಜಿತ ದಾಳಿಯ ಎಚ್ಚರಿಕೆ ಸಂದೇಶ ಸ್ವೀಕರಿಸಿದ್ದೇವೆ'; ಪ್ರತಿಪಕ್ಷ ನಾಯಕರ ಹೇಳಿಕೆ