ಕರ್ನಾಟಕ

karnataka

ETV Bharat / bharat

ಎಲ್​ಎಂವಿ ಪರವಾನಗಿ ಹೊಂದಿರುವವರು ಲಘು ಸಾರಿಗೆ ವಾಹನ ಓಡಿಸಬಹುದೇ?; ಕೇಂದ್ರಕ್ಕೆ ಸ್ಪಷ್ಟನೆ ಕೇಳಿದ ಸುಪ್ರೀಂಕೋರ್ಟ್

ಲಘು ಮೋಟಾರು ವಾಹನ ಪರವಾನಗಿ ಹೊಂದಿರುವವರು ಲಘು ಸಾರಿಗೆ ವಾಹನಗಳನ್ನೂ ಓಡಿಸಬಹುದೇ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

Whether LMV license holders can drive light transport vehicles
Whether LMV license holders can drive light transport vehicles

By ETV Bharat Karnataka Team

Published : Nov 22, 2023, 6:20 PM IST

ನವದೆಹಲಿ: ಲಘು ಮೋಟಾರು ವಾಹನ (ಎಲ್ಎಂವಿ) ಚಾಲನಾ ಪರವಾನಗಿ ಹೊಂದಿರುವವರು ಎಲ್ಎಂವಿ ವರ್ಗದ ಸಾರಿಗೆ ವಾಹನ ಓಡಿಸಲು ಪ್ರತ್ಯೇಕ ಅನುಮೋದನೆಯ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಮುಂದಿನ ವರ್ಷದ ಜನವರಿ 17ರೊಳಗೆ ಸ್ಪಷ್ಟ ಮಾರ್ಗಸೂಚಿ ಒದಗಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ.ಎಸ್.ನರಸಿಂಹ, ಪಂಕಜ್ ಮಿಥಾಲ್ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು ಈ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗದು ಎಂದು ಹೇಳಿತು.

"ಮುಕುಂದ್ ದೇವಾಂಗನ್ ಪ್ರಕರಣದಲ್ಲಿ ಮೂವರು ನ್ಯಾಯಾಧೀಶರ ಪೀಠ ನೀಡಿರುವ ಆದೇಶದ ನಿಖರತೆಯನ್ನು ಈ ನ್ಯಾಯಾಲಯವು ನಿರ್ಧರಿಸಬೇಕಿದೆ. ಆ ಆದೇಶದಲ್ಲಿನ ಉಲ್ಲೇಖಗಳ ಬಗ್ಗೆ ಖಚಿತತೆ ನಿರ್ಧರಿಸಬೇಕು" ಎಂದು ಹೇಳಿದ ಐವರು ನ್ಯಾಯಾಧೀಶರ ಪೀಠವು, ಈ ಬಗ್ಗೆ ಕೇಂದ್ರ ಸರ್ಕಾರ ತನ್ನ ನೀತಿಯನ್ನು ತ್ವರಿತವಾಗಿ ಪರಿಶೀಲಿಸುವಂತೆ ಕೇಳಿದೆ.

ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ (ಎಜಿ) ಆರ್. ವೆಂಕಟರಮಣಿ ಅವರು, ಮೋಟಾರು ವಾಹನ ಕಾಯ್ದೆ, 1988 ರ ಅನೇಕ ನಿಬಂಧನೆಗಳನ್ನು ಮರುಪರಿಶೀಲಿಸುವ ಅಗತ್ಯವಿದೆ ಮತ್ತು ಕೇಂದ್ರ ಸರ್ಕಾರವು ಈ ಪ್ರಶ್ನಾರ್ಹ ಕಾನೂನನ್ನು ತಿದ್ದುಪಡಿ ಮಾಡುವ ಬಗ್ಗೆ ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುತ್ತಿದೆ ಎಂದು ಹೇಳಿದರು. "ವಾಸ್ತವವಾಗಿ, ಫೆಬ್ರವರಿಯಲ್ಲಿ ನಡೆಯಲಿರುವ ಸಂಸತ್ತಿನ ಮುಂದಿನ ಬಜೆಟ್ ಅಧಿವೇಶನದ ಮೊದಲು ಇದನ್ನು ಇತ್ಯರ್ಥಪಡಿಸುವಂತೆ ನಾನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವನ್ನು ಒತ್ತಾಯಿಸಿದ್ದೇನೆ" ಎಂದು ಅಟಾರ್ನಿ ಜನರಲ್ ವೆಂಕಟರಮಣಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಹೃಷಿಕೇಶ್ ರಾಯ್, "ಕೇಂದ್ರ ಸರ್ಕಾರ ಒತ್ತಡ ಹೇರಿದರೆ, ರಾಜ್ಯ ಸರ್ಕಾರಗಳಿಂದ ತ್ವರಿತವಾಗಿ ಪ್ರತಿಕ್ರಿಯೆಗಳು ಬರುತ್ತವೆ ಎಂದು ನನಗೆ ಖಾತ್ರಿಯಿದೆ ಮತ್ತು ಈ ವಿಷಯವು ಬೇಗ ವಿಚಾರಣೆಗೆ ಬರಲಿದೆ ಎಂಬ ಅಂಶವು ರಾಜ್ಯ ಸರ್ಕಾರಗಳಿಗೆ ತಿಳಿದಿದ್ದರೆ ಬಹುಶಃ ಈ ವಿಷಯ ಸ್ವಲ್ಪ ವೇಗವಾಗಿ ಮುಂದುವರಿಯಬಹುದು" ಎಂದು ಹೇಳಿದರು. ಸಮಾಲೋಚನಾ ಪ್ರಕ್ರಿಯೆಯ ಸಮಯದಲ್ಲಿ ಎಲ್ಲ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ ನಿಗದಿಪಡಿಸಿದ ಸಮಯಕ್ಕೆ ಬದ್ಧವಾಗಿರಬೇಕು ಎಂದು ಸಂವಿಧಾನ ಪೀಠ ತನ್ನ ಆದೇಶದಲ್ಲಿ ನಿರ್ದೇಶಿಸಿದೆ.

ಪ್ರಸ್ತುತ ಐವರು ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆ ಬಾಕಿ ಇರುವಾಗ, ದೇಶಾದ್ಯಂತ ವಿವಿಧ ನ್ಯಾಯಮಂಡಳಿಗಳು ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು 2017 ರ ಮುಕುಂದ್ ದೇವಾಂಗನ್ ತೀರ್ಪಿನ ಪ್ರಕಾರ ನಿರ್ಧರಿಸಲಾಗುವುದು ಎಂದು ಅದು ಸ್ಪಷ್ಟಪಡಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ 17, 2024 ರಂದು ನಡೆಯುವ ಸಾಧ್ಯತೆಯಿದೆ.

2017 ರ ಮುಕುಂದ್ ದೇವಾಂಗನ್ ಪ್ರಕರಣದಲ್ಲಿ- ಮಧ್ಯಮ / ಭಾರಿ ಸರಕುಗಳು ಮತ್ತು ಪ್ರಯಾಣಿಕರ ವಾಹನಗಳಿಗೆ ಮಾತ್ರ ಸಾರಿಗೆ ಪರವಾನಗಿಯ ಅಗತ್ಯ ಉದ್ಭವಿಸುತ್ತದೆ ಮತ್ತು ಇತರ ಯಾವುದೇ ವಾಹನಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿದರೂ ಸಹ ಯಾವುದೇ ಪ್ರತ್ಯೇಕ ಅನುಮೋದನೆಯ ಅಗತ್ಯವಿಲ್ಲ ಎಂದು ತೀರ್ಪು ಬಂದಿತ್ತು. ಬೇರೆ ರೀತಿಯಲ್ಲಿ ಹೇಳುವುದಾದರೆ, ಎಲ್ಎಂವಿ ಪರವಾನಗಿ ಹೊಂದಿರುವವರಿಗೆ ಇ-ರಿಕ್ಷಾಗಳು, ಕಾರುಗಳು, ವ್ಯಾನ್​ಗಳು, ಮುಂತಾದ ಲಘು ಮೋಟಾರು ವಾಹನಗಳ (ಎಲ್ಎಂವಿ) ವಾಣಿಜ್ಯ ಬಳಕೆಗೆ ಚಲಾಯಿಸುವುದಕ್ಕೆ ಯಾವುದೇ ಪ್ರತ್ಯೇಕ ಅನುಮೋದನೆ ಅಗತ್ಯವಿಲ್ಲ.

ಇದನ್ನೂ ಓದಿ : ಕರ್ನಾಟಕದಲ್ಲಿ ಕಾಂಗ್ರೆಸ್​ ಭರವಸೆಗಳು ವಿಫಲ: ತೆಲಂಗಾಣ ಪ್ರಚಾರದಲ್ಲಿ ಮಾಜಿ ಸಿಎಂ ಬಿಎಸ್​​ವೈ ಟೀಕೆ

ABOUT THE AUTHOR

...view details