ಕೋಲ್ಕತ್ತಾ: ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ಘೋಷಣೆ ನಂತರ, ಚುನಾವಣೆ ದಿನ ನಡೆದ ಹಿಂಸಾಚಾರದ ಕಿಡಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂಜಾಗ್ರತ ಕ್ರಮವಾಗಿ ಇನ್ನೂ 10 ದಿನಗಳ ಕಾಲ ಕೇಂದ್ರ ಪಡೆಗಳನ್ನು ರಾಜ್ಯದಲ್ಲೇ ಇರಿಸುವ ಕೇಂದ್ರದ ನಿರ್ಧಾರಕ್ಕೆ ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮೊಯ್ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠ ಕೇಂದ್ರ ಗೃಹ ಸಚಿವಾಲಯಕ್ಕೆ ಈ ಅನುಮೋದನೆ ನೀಡಿದೆ.
'ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ, ಗಲಾಟೆ ನಡೆಯಬಹುದು ಎನ್ನುವಂತಹ ಪ್ರದೇಶಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ ಉಳಿದಿರುವ ಕೇಂದ್ರ ಪಡೆಗಳನ್ನು ನಿಯೋಜಿಸಬಹುದು. 10 ದಿನಗಳ ಅವಧಿಗೆ ಕೇಂದ್ರ ಪಡೆ ರಾಜ್ಯದಲ್ಲೇ ಇರಲು ಅವಕಾಶ ನೀಡಿದ್ದು, ಹಂತ ಹಂತವಾಗಿ ಕೇಂದ್ರ ಪಡೆಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ಮುಕ್ತ ಅವಕಾಶವಿದೆ' ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ಕನಿಷ್ಠ 136 ತಂಡಗಳ ಕೇಂದ್ರ ಪಡೆಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗಿದೆ ಎಂದು ಕೇಂದ್ರದಿಂದ ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಜುಲೈ 8 ರಂದು ನಡೆದ ಮೂರು ಹಂತದ ಪಂಚಾಯತ್ ಚುನಾವಣೆ ಸಂದರ್ಭ ಹೈಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ನಿಯೋಜನೆ ಮಾಡಲು 821 ಕೇಂದ್ರ ಪಡೆಗಳ ತಂಡವನ್ನು ಕಳುಹಿಸಿತ್ತು. ಜೂನ್ 8 ರಂದು ಪಂಚಾಯತ್ ಚುನಾವಣೆ ದಿನಾಂಕಗಳನ್ನು ಘೋಷಿಸಿದ ನಂತರ ರಾಜ್ಯದ ಹಲವು ಭಾಗಗಳಲ್ಲಿ ಹಿಂಸಾಚಾರದ ದೃಷ್ಟಿಯಿಂದ ಹೈಕೋರ್ಟ್ ಕೇಂದ್ರ ಪಡೆಗಳಿಗೆ ಆದೇಶ ನೀಡಿತ್ತು.