ನವದೆಹಲಿ: ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (CCEA) ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದ ಭಾರತ್ ಪೆಟ್ರೋ ರಿಸೋರ್ಸಸ್ ಲಿಮಿಟೆಡ್ (BPRL) ನಿಂದ 1.6 ಶತಕೋಟಿ ಡಾಲರ್ ಅಥವಾ 12,000 ಕೋಟಿ ರೂಪಾಯಿಗಳ ಹೆಚ್ಚುವರಿ ಹೂಡಿಕೆಗೆ ಅನುಮೋದನೆ ನೀಡಿದೆ. ಬ್ರೆಜಿಲ್‌ನಲ್ಲಿ BM-SEAL-11 ರಿಯಾಯಿತಿ ಯೋಜನೆಯನ್ನು ಪ್ರಾರಂಭಿಸಲು ಕಂಪನಿಯು ಈ ಹೂಡಿಕೆ ಮಾಡಲಿದೆ.
ಸಿಸಿಇಎ ಸಹ ಬಿಪಿಆರ್ಎಲ್ ನಲ್ಲಿ ಬಿಪಿಸಿಎಲ್ ನಿಂದ ಈಕ್ವಿಟಿ ಹೂಡಿಕೆ ಮಿತಿಯನ್ನು ಮತ್ತು ಕಂಪನಿಯ ಅಧಿಕೃತ ಷೇರು ಬಂಡವಾಳವನ್ನು 15,000 ಕೋಟಿ ರೂ.ಗಳಿಂದ 20,000 ಕೋಟಿ ರೂ.ಗಳಿಗೆ (ಕಾಲಕಾಲಕ್ಕೆ ಬಿಪಿಸಿಎಲ್ ನಿಂದ ಚಂದಾದಾರಿಕೆ) ಹೆಚ್ಚಿಸಲು ಅನುಮೋದಿಸಿದೆ. ಈಕ್ವಿಟಿಯ ಮಿತಿಯನ್ನು ಹೆಚ್ಚಿಸಲು ಸಂಸ್ಥೆಗೆ ಅಧಿಕಾರ ನೀಡಲಾಗಿದೆ.
BM-SEAL-11 ಯೋಜನೆಯಲ್ಲಿ ಉತ್ಪಾದನೆಯು 2026-27 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಭಾರತದ ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಭಾರತದ ಕಚ್ಚಾ ತೈಲ ಪೂರೈಕೆಯನ್ನು ವೈವಿಧ್ಯಗೊಳಿಸಲು ಈಕ್ವಿಟಿ ತೈಲವನ್ನು ಪ್ರವೇಶಿಸಲು ಸಹಾಯ ಮಾಡಲಿದೆ. ಭಾರತೀಯ ತೈಲ ಕಂಪನಿಗಳು ಬ್ರೆಜಿಲ್‌ನಿಂದ ಹೆಚ್ಚುವರಿ ಕಚ್ಚಾ ತೈಲವನ್ನು ಪಡೆಯಲು ಆಸಕ್ತಿ ತೋರಿಸಿವೆ.
ಇದು ಭಾರತವು ಬ್ರೆಜಿಲ್‌ನಲ್ಲಿ ನೆಲೆಗೊಳ್ಳಲು ಸಹಾಯ ಮಾಡುತ್ತದೆ. ನೆರೆಯ ಲ್ಯಾಟಿನ್ ಅಮೆರಿಕನ್ ದೇಶಗಳಿಗೆ ವ್ಯಾಪಾರ ಮಾರ್ಗಗಳನ್ನು ಈ ಮೂಲಕ ತೆರೆಯುತ್ತದೆ. ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.