ಜಲೌನ್ (ಉತ್ತರ ಪ್ರದೇಶ): ಮದುವೆ ಸಮಾರಂಭ ಮುಗಿಸಿ ವಾಪಸಾಗುತ್ತಿದ್ದ ದಿಬ್ಬಣದ ಬಸ್ ಕಂದಕಕ್ಕೆ ಉರುಳಿ ಐವರು ಸಾವನ್ನಪ್ಪಿ, 12ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಸಂಜೆ ಮದುವೆ ಸಮಾರಂಭ ಮುಗಿಸಿ ಬರುತ್ತಿದ್ದವರ ಬಸ್ಸು ಇಲ್ಲಿನ ಗೋಪಾಲಪುರ್ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ. ಅಪಘಾತದಲ್ಲಿ ಕುಲದೀಪ್ (36), ರಘುನಂದನ್ (46), ಸಿರೋಬನ್ (65), ಕರಣ್ ಸಿಂಗ್ (34), ವಿಕಾಸ್ (32) ಎಂಬುವರು ಮೃತಪಟ್ಟಿದ್ದಾರೆ.
ಇಲ್ಲಿನ ಮಾವಾಯಿ ಗ್ರಾಮದಿಂದ ಧೂತ ಉಮ್ರಿ ಗ್ರಾಮಕ್ಕೆ ಮದುವೆ ಸಮಾರಂಭಕ್ಕೆಂದು ಜನರು ತೆರಳಿದ್ದರು. ಬಳಿಕ ಶನಿವಾರ ರಾತ್ರಿ ಮದುವೆ ಸಂಭ್ರಮಗಳನ್ನು ಮುಗಿಸಿ ವಾಪಸಾಗುತ್ತಿದ್ದಾಗ ರಾತ್ರಿ 2 ಗಂಟೆ ಸುಮಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ವಾಹನವನ್ನು ತಪ್ಪಿಸಲು ಹೋದ ಬಸ್ ಚಾಲಕನು ನೇರ ಹೋಗಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ಬಸ್ ಕಂದಕಕ್ಕೆ ಉರುಳಿದೆ. ಸುಮಾರು 40 ಪ್ರಯಾಣಿಕರು ಬಸ್ನಲ್ಲಿದ್ದರು. ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ ಒಟ್ಟು ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಒರೈನ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.