ಕರ್ನಾಟಕ

karnataka

ETV Bharat / bharat

ಮಹಿಳಾ ಮೀಸಲಾತಿ ಮಸೂದೆ ಮಾಜಿ ಪಿಎಂ ದೇವೇಗೌಡರ ಕನಸಿನ ಕೂಸು: ಬಿಆರ್​ಎಸ್​

ಮಹಿಳಾ ಮೀಸಲಾತಿ ಮಸೂದೆ ತನ್ನದೆಂದು ಕಾಂಗ್ರೆಸ್​ ಹೇಳುತ್ತಿದ್ದರೆ, ಇದನ್ನು ಟೀಕಿಸಿರುವ ಬಿಆರ್​ಎಸ್​ ಮಾಜಿ ಪ್ರಧಾನಿ ದೇವೇಗೌಡರ ಕನಸಿನ ಕೂಸು ಎಂದು ಹೇಳಿದೆ.

ಮಹಿಳಾ ಮೀಸಲಾತಿ ಮಸೂದೆ
ಮಹಿಳಾ ಮೀಸಲಾತಿ ಮಸೂದೆ

By ETV Bharat Karnataka Team

Published : Sep 18, 2023, 5:46 PM IST

ಹೈದರಾಬಾದ್:ಬಹುಚರ್ಚಿತ ಮಹಿಳಾ ಮೀಸಲಾತಿ ಮಸೂದೆಯ ಕ್ರೆಡಿಟ್​ ವಾರ್​ ಶುರುವಾಗಿದೆ. ಇದನ್ನು ಕಾಂಗ್ರೆಸ್​ ತನ್ನ ಕನಸಿನ ಕೂಸು ಎಂದಿದ್ದರೆ, ಮಾಜಿ ಪ್ರಧಾನಿ, ಜೆಡಿಎಸ್​ ಹಿರಿಯ ನಾಯಕ ಹೆಚ್​ಡಿ ದೇವೇಗೌಡರಿಗೆ ಇದರ ಹಿರಿಮೆ ಸಲ್ಲಬೇಕು ಎಂದು ತೆಲಂಗಾಣದ ಭಾರತ್​ ರಾಷ್ಟ್ರೀಯ ಸಮಿತಿ (ಬಿಆರ್​ಎಸ್​) ಹೇಳಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬಿಆರ್‌ಎಸ್ ಪಕ್ಷದ ಎಂಎಲ್‌ಸಿ ಕೆ ಕವಿತಾ ಅವರು, ಮಹಿಳಾ ಮೀಸಲಾತಿಯನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು, ಬಳಿಕ ಅದನ್ನು ಕಾಂಗ್ರೆಸ್​ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮಸೂದೆ ರೂಪಿಸಿ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತು. ಹೀಗಾಗಿ ಅವರು ಅದರ ಶ್ರೇಯವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಕಳೆದ 16 ವರ್ಷಗಳಿಂದ ಕಾಂಗ್ರೆಸ್ ಈ ಬಗ್ಗೆ ಒಂದೇ ಒಂದು ಮಾತನ್ನೂ ಸಹ ಆಡಲಿಲ್ಲ. ಮಸೂದೆ ಮಂಡಿಸುವ, ಅಂಗೀಕರಿಸುವ ಬಗ್ಗೆ ಎಲ್ಲಿಯೂ ಚರ್ಚಿಸಿಲ್ಲ. 2019 ರ ಚುನಾವಣೆಯ ಪ್ರಣಾಳಿಕೆಯಲ್ಲೂ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ನಮೂದಿಸಲಿಲ್ಲ. ಇದೀಗ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಮಸೂದೆಯ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ತೆಲಂಗಾಣ ಸಿಎಂ ಕೆ ಚಂದ್ರಶೇಖರ್​ರಾವ್​ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಿ ಎಂದು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದರಿಂದ ಬೆದರಿರುವ ಕಾಂಗ್ರೆಸ್​ ರಾಜ್ಯದಲ್ಲಿ ನಡೆದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅನಿವಾರ್ಯವಾಗಿ ಮೀಸಲಾತಿ ಪರ ನಿರ್ಣಯ ಕೈಗೊಂಡಿದ್ದಾರೆ ಎಂದು ಕವಿತಾ ಅವರು ಹೇಳಿದರು.

ಗ್ಯಾರಂಟಿಗಳು ಚುನಾವಣಾ ಗಿಮಿಕ್​;ಚುನಾವಣೆ ಗಿಮಿಕ್​ಗಾಗಿ ತೆಲಂಗಾಣದಲ್ಲಿ ಕಾಂಗ್ರೆಸ್​ 6 ಗ್ಯಾರಂಟಿಗಳನ್ನು ಘೋಷಿಸಿದೆ. ಇವೆಲ್ಲವನ್ನೂ ಜಾರಿ ಮಾಡಲು ಸಾಧ್ಯವಿಲ್ಲ. ಇದು ತೆಲಂಗಾಣ ಜನತೆಗೆ ಗೊತ್ತಿದೆ. ಈ ಹಿಂದಿನಿಂದಲೂ ಆ ಪಕ್ಷ ಜನರಿಗೆ ಮೋಸ ಮಾಡುತ್ತಾ ಬಂದಿದೆ. ನಾವು ಆಂಧ್ರದೊಂದಿಗೆ ವಿಲೀನಗೊಳ್ಳಲು ಬಯಸಲಿಲ್ಲ. ಆದರೂ ಬಲವಂತವಾಗಿ ಆಂಧ್ರದೊಂದಿಗೆ ವಿಲೀನಗೊಳಿಸಿದರು ಎಂದು ಕಿಡಿಕಾರಿದರು.

ಮೀಸಲಾತಿ ಮಸೂದೆ ಮಂಡಿಸಲು ಕಾಂಗ್ರೆಸ್​ ಆಗ್ರಹ:ಇಂದಿನಿಂದ ಆರಂಭವಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಬೇಕು ಎಂದು ಕಾಂಗ್ರೆಸ್​ ಒತ್ತಾಯಿಸಿದೆ. ಈ ಮೀಸಲಾತಿ ಕಾಂಗ್ರೆಸ್​ನ ಕೂಸು, ಬಿಜೆಪಿಯವರಿಗೆ ಮಹಿಳೆಯವರ ಮೇಲೆ ಗೌರವ ಇದ್ದರೆ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕಾರ ಪಡೆದುಕೊಳ್ಳಲಿ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.

ಇದನ್ನೂ ಓದಿ:ಮಹಿಳಾ ಮೀಸಲಾತಿ ಪರ ಕಾಂಗ್ರೆಸ್​ ಬ್ಯಾಟಿಂಗ್​.. ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಕೇಂದ್ರಕ್ಕೆ ಆಗ್ರಹ

ABOUT THE AUTHOR

...view details