ನವದೆಹಲಿ:''ದೇಶದ ಅಗ್ರ ಕುಸ್ತಿಪಟುಗಳ ನಿರಂತರ ಪ್ರತಿಭಟನೆಯಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ'' ಎಂದು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಸೋಮವಾರ ಹೇಳಿದ್ದಾರೆ. ಡಬ್ಲ್ಯುಎಫ್‌ಐ ಮುಖ್ಯಸ್ಥರು ''ತಾವು ಗಲ್ಲಿಗೇರಲು ಸಿದ್ಧರಿದ್ದು, ಆದರೆ ಕುಸ್ತಿ ಚಟುವಟಿಕೆಗಳು ನಿಲ್ಲಬಾರದು. ಏಕೆಂದರೆ ಇದರಿಂದ ಕೆಡೆಟ್ ಮತ್ತು ಜೂನಿಯರ್ ಕುಸ್ತಿಪಟುಗಳಿಗೆ ನಷ್ಟ ಉಂಟಾಗುತ್ತದೆ'' ಎಂದು ಅವರು ಹೇಳಿದ್ದಾರೆ.
''ಕಳೆದ ನಾಲ್ಕು ತಿಂಗಳಿನಿಂದ ಎಲ್ಲ ಕುಸ್ತಿ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದರು. ನನ್ನನ್ನು ಗಲ್ಲಿಗೇರಿಸಿ ಎಂದು ನಾನು ಹೇಳುತ್ತೇನೆ. ಕುಸ್ತಿ ಚಟುವಟಿಕೆಗಳನ್ನು ಮಾತ್ರ ನಿಲ್ಲಿಸಬೇಡಿ. ಮಕ್ಕಳ ಭವಿಷ್ಯದ ಜೊತೆಗೆ ಆಟವಾಡಬೇಡಿ. ಕೆಡೆಟ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ನಡೆಯಲಿದ್ದು, ಅದನ್ನು ಯಾರೇ ಆಯೋಜಿಸಲಿ. ಮಹಾರಾಷ್ಟ್ರ, ತಮಿಳುನಾಡು ಅಥವಾ ತ್ರಿಪುರಾ ಆಗಿರಲಿ. ಆದರೆ, ಕುಸ್ತಿ ಚಟುವಟಿಕೆಗಳನ್ನು ಮಾತ್ರ ಸ್ಥಗಿತಗೊಳಿಸಬೇಡಿ'' ಎಂದು ಮನವಿ ಮಾಡಿದ್ರು.
ಬ್ರಿಜ್ ಭೂಷಣ್ ಎರಡು ಎಫ್ಐಆರ್ ದಾಖಲು:ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಭಟನಾನಿರತ ಮಹಿಳಾ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ. ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಈಗಾಗಲೇ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಮೊದಲನೆಯದು ಅಪ್ರಾಪ್ತ ವಯಸ್ಕರಿಂದ ಮಾಡಿದ ಆರೋಪಗಳಿಗೆ ಸಂಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೂರುಗಳ ಸಮಗ್ರ ತನಿಖೆಗೆ ಸಂಬಂಧಿಸಿದಂತೆ ಎರಡನೇ ಎಫ್ಐಆರ್ ದಾಖಲಿಸಲಾಗಿದೆ.
ಮೂರು ಸದಸ್ಯರ ಸಮಿತಿ ರಚನೆ:ಕ್ರೀಡಾ ಸಚಿವಾಲಯವು ಕುಸ್ತಿ ಫೆಡರೇಶನ್‌ನ ಮೇ 7ರ ಚುನಾವಣೆಯನ್ನು ಸ್ಥಗಿತಗೊಳಿಸಿದೆ. ಕ್ರೀಡಾ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು 45 ದಿನಗಳಲ್ಲಿ ಚುನಾವಣೆಗಳನ್ನು ನಡೆಸಲು ತಾತ್ಕಾಲಿಕ ಸಮಿತಿಯನ್ನು ಸ್ಥಾಪಿಸಲು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ)ಗೆ ಕೇಳಿದೆ. ಐಒಎ ಮಾಜಿ ಶೂಟರ್ ಸುಮಾ ಶಿರೂರ್ ಮತ್ತು ಭಾರತೀಯ ವುಶು ಫೆಡರೇಶನ್ ಅಧ್ಯಕ್ಷ ಭೂಪೇಂದ್ರ ಸಿಂಗ್ ಬಾಜ್ವಾ ಅವರನ್ನು ಒಳಗೊಂಡ ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಸಮಿತಿಯ ಅಧ್ಯಕ್ಷರು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿದ್ದು, ಅವರ ಹೆಸರನ್ನು ಇನ್ನೂ ಪ್ರಕಟಿಸಲಾಗಿಲ್ಲ.