ಗಾಂಧಿನಗರ (ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 1 ರಂದು ಗುಜರಾತ್‌ನ ಮೋರ್ಬಿಗೆ ಭೇಟಿ ನೀಡಲಿದ್ದಾರೆ ಎಂದು ಗುಜರಾತ್‌ನ ಮುಖ್ಯಮಂತ್ರಿ ಕಚೇರಿ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸಾವಿನ ಸಂಖ್ಯೆ 132ಕ್ಕೆ ಏರಿಕೆ: ಮೋರ್ಬಿ ಪಟ್ಟಣದ ತೂಗು ಸೇತುವೆಯೊಂದು ಭಾನುವಾರ ಕುಸಿದು ಬಿದ್ದಿದ್ದು, ದುರಂತದಲ್ಲಿ ಮಹಿಳೆಯರು, ಮಕ್ಕಳು ಸೇರಿ ಈವರೆಗೆ ಸುಮಾರು 132 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, 100ಕ್ಕೂ ಹೆಚ್ಚು ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಕೇಂದ್ರವೂ ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಾಯವನ್ನು ನೀಡುತ್ತಿದೆ. ರಾಜ್ಯ ಸರ್ಕಾರ ಘಟನೆಯ ತನಿಖೆಗಾಗಿ ವಿಶೇಷ ಸಮಿತಿ ರಚಿಸಿದೆ ಎಂದು ಪ್ರಧಾನಿ ಮೋದಿ ಈಗಾಗಲೇ ತಿಳಿಸಿದ್ದಾರೆ.
ದುರಂತಕ್ಕೆ ಕಾರಣವೇನು?: ಸೇತುವೆ ನವೀಕರಣದ ಬಳಿಕ ಅದರ ಗುಣಮಟ್ಟವನ್ನು ಪರಿಶೀಲನೆ ಮಾಡಿಲ್ಲ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ದುರಂತ ಸಂಭವಿಸಿದ ಸೇತುವೆಯ ಮೇಲೆ 150 ಜನರು ಒಟ್ಟಿಗೆ ಓಡಾಡಬಹುದು ಅಥವಾ ನಿಲ್ಲಬಹುದು. ಆದ್ರೆ, ಪೂಜೆ ಎಂದು ಸಾಮರ್ಥ್ಯಕ್ಕಿಂತ ಮೂರು ಪಟ್ಟು ಅಂದ್ರೆ ಸುಮಾರು 500 ಜನರು ನಿಂತಿದ್ದೇ ಕುಸಿದು ಬೀಳಲು ಪ್ರಮುಖ ಕಾರಣ ಎನ್ನಲಾಗಿದೆ.
ಸಂತಾಪ ಸೂಚಿಸಿದ ಜಾಗತಿಕ ನಾಯಕರು: ಗುಜರಾತ್ನಲ್ಲಿ ನಡೆದ ದುರಂತಕ್ಕೆ ಜಾಗತಿಕ ನಾಯಕರು ಸಂತಾಪ ಸೂಚಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಮತ್ತು ನೇಪಾಳದ ಪ್ರಧಾನಿ ಶೇರ್ ಬಹದೂರ್ ದೇವುಬಾ ಬೇಸರ ವ್ಯಕ್ತಪಡಿಸಿದ್ದಾರೆ.