ಕೊಲ್ಲಂ(ಕೇರಳ): ಮದುವೆಗೆ ಮುನ್ನಾ ದಿನ ದೇವಸ್ಥಾನಕ್ಕೆ ತೆರಳಿದ್ದ ವಧು ಮತ್ತು ವರ 120 ಅಡಿ ಆಳದ ಕಲ್ಲಿನ ನೀರಿನ ಕೊಳಕ್ಕೆ ಬಿದ್ದು ಗಾಯಗೊಂಡ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. ಗಾಯಗೊಂಡು ಇಬ್ಬರೂ ಆಸ್ಪತ್ರೆ ಸೇರಿದ್ದರಿಂದ ಮದುವೆಯನ್ನು ಮುಂದೂಡಲಾಗಿದೆ.
ಇಲ್ಲಿನ ಪರವೂರಿನ ವಿನು ಕೃಷ್ಣನ್ ಮತ್ತು ಕಲ್ಲುವಾತುಕ್ಕಲ್‌ನ ಸಾಂಡ್ರಾ ಎಸ್.ಕುಮಾರ್ ಎಂಬ ಜೋಡಿಗೆ ಇಂದು ಮದುವೆ ನಿಗದಿಯಾಗಿತ್ತು. ಇದರ ಮುನ್ನಾ ದಿನವಾದ ಗುರುವಾರ ವಿವಿಧ ದೇವಸ್ಥಾನಗಳಿಗೆ ಹೋಗಿದ್ದರು. ಅಂತೆಯೇ ಇಬ್ಬರೂ ವೇಲಮನೂರು ಕಟ್ಟುಪುರಂ ಬಳಿಯ ದೇವಸ್ಥಾನಕ್ಕೆ ತೆರಳಿದ್ದಾಗ ಸಮೀಪದ ನೀರಿನ ಕೊಳ ಹಾಗೂ ಹೊಂಡಕ್ಕೂ ಭೇಟಿ ನೀಡಿದ್ದಾರೆ.
ಆಗ ನೀರಿನ ಕೊಳ ಮೇಲ್ಭಾಗವನ್ನು ಹತ್ತುವಾಗ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ ಸಂಡ್ರಾ ಕಾಲು ಜಾರಿ 120 ಅಡಿಗೂ ಹೆಚ್ಚು ಆಳದ ಕೊಳಕ್ಕೆ ಬಿದ್ದರು. ಸಾಂಡ್ರಾಳನ್ನು ರಕ್ಷಿಸಲು ವಿನು ಕೂಡ ಕೊಳಕ್ಕೆ ಹಾರಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಸಾಂಡ್ರಾಳನ್ನು ವಿನು ಕೃಷ್ಣ ರಕ್ಷಿಸಿ ಬಂಡೆಯ ಮೇಲೆ ತಂದು ಕೂರಿಸಿಕೊಂಡಿದ್ದಾರೆ. ವಿನು ಕೂಡ ಗಾಯಗೊಂಡಿದ್ದಾರೆ.
ಈ ವೇಳೆ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕಾರ್ಮಿಕರು ನೋಡಿ ಸ್ಥಳೀಯರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಕೊಳದ ಮೇಲ್ಭಾಗದಿಂದ ಹಗ್ಗ ಹಾಕಿ ಇಬ್ಬರಿಗೆ ಕಟ್ಟಿದ್ದಾರೆ. ಬಳಿಕ ತೆಪ್ಪವನ್ನು ಕೆರೆಗಿಳಿಸಿ ಇಬ್ಬರನ್ನೂ ರಕ್ಷಿಸಿ ದಡ ಸೇರಿಸಿದ್ದಾರೆ. ಇಬ್ಬರೂ ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಟೈರ್ ಸ್ಫೋಟಿಸಿ ಮತ್ತೊಂದು ವಾಹನಕ್ಕೆ ಕಾರು ಡಿಕ್ಕಿ: ನಾಲ್ವರು ವಿದ್ಯಾರ್ಥಿಗಳ ದುರ್ಮರಣ