ಬಹನಾಗಾ (ಒಡಿಶಾ):ಶುಕ್ರವಾರ ಸಂಭವಿಸಿದ ಭೀಕರ ರೈಲು ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆಯಲ್ಲಿ ಮೊದಲಿಗರಾಗಿ ಪಾಲ್ಗೊಂಡಿದ್ದ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ಎಂಬಲ್ಲಿನ ಇಬ್ಬರು ಕೆಚ್ಚೆದೆಯ ಯುವಕರಾದ ದೀಪಕ್ ರಂಜನ್ ಬೆಹರಾ ಮತ್ತು ಶುಭಂಕರ್ ಜೆನಾ ತಮ್ಮ ಅನುಭವವನ್ನು 'ಈಟಿವಿ ಭಾರತ'ದ ಜೊತೆ ಹಂಚಿಕೊಂಡಿದ್ದಾರೆ.
"ಅಂದು ಸಂಜೆ ಬಹನಗಾದ ಮೈದಾನದಲ್ಲಿ ನಾನು (ದೀಪಕ್ ರಂಜನ್ ಬೆಹರಾ) ಸ್ನೇಹಿತರೊಂದಿಗೆ ಆಟವಾಡುತ್ತಿದ್ದೆ. 6.45ರ ಸುಮಾರಿಗೆ ಭೂಕಂಪದಂತಹ ಭಯಾನಕ ಶಬ್ಧ ಕೇಳಿಸಿತು. ತಕ್ಷಣವೇ ಎಂಟು ಜನರ ತಂಡವಾಗಿ ನಾವು ಸ್ಥಳಕ್ಕೆ ಧಾವಿಸಿದೆವು. ಪರಿಸ್ಥಿತಿ ಅರಿತು ತಡ ಮಾಡದೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆವು. ಅಷ್ಟರಲ್ಲಿ ವಿಷಯ ತಿಳಿದು ಇಡೀ ಗ್ರಾಮವೇ ಅಲ್ಲಿಗೆ ತಲುಪಿತು. ಎಲ್ಲರೂ ಬೋಗಿಗಳಿಂದ ಜನರನ್ನು ಹೊರತರಲು ಪ್ರಾರಂಭಿಸಿದರು. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಸರ್ಕಾರಿ ನೆರವು ತಂಡಗಳು ಬರುವ ಮೊದಲೇ ರಾತ್ರಿ 9 ಗಂಟೆಯವರೆಗೆ ಎಲ್ಲ ಕಾರ್ಯವನ್ನು ಸ್ವತಃ ನಾವೇ ಮಾಡುತ್ತಿದ್ದೆವು."
"ನಾವು ಬೋಗಿಗಳನ್ನು ಹತ್ತಿದಾಗ ಎಲ್ಲ ಪ್ರಯಾಣಿಕರು ಒಬ್ಬರ ಮೇಲೊಬ್ಬರು ರಾಶಿ ಹಾಕಿದ ರೀತಿಯಲ್ಲಿ ಬಿದ್ದಿದ್ದರು. ಹಲವರು ರೈಲಿನ ಕೆಳಭಾಗದಲ್ಲಿ ಸಿಲುಕಿಕೊಂಡಿದ್ದರು. ಅವರು ತಮ್ಮನ್ನು ರಕ್ಷಿಸುವಂತೆ ಜೋರಾಗಿ ಕೂಗುತ್ತಿದ್ದರು. ರೈಲು ಬೋಗಿಯಲ್ಲಿ ಕತ್ತಲೆ ಆವರಿಸಿತ್ತು. ಎಲ್ಲವೂ ಕೂಡ ಅಲ್ಲಿ ಅದೃಶ್ಯವಾಗಿತ್ತು. ನಾವು ತಡ ಮಾಡದೇ ಬೋಗಿಯಲ್ಲಿ ಸಿಲುಕಿದ್ದ ಸಾಧವಾದಷ್ಟು ಜನರನ್ನು ಹೊರತೆಗೆದೆವು. ಕೆಲವರು ಅದಾಗಲೇ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಇತರರು ಚಲನರಹಿತರಾಗಿ ಒಂದೇ ಸ್ಥಳದಲ್ಲಿ ನಿಂತಿದ್ದರು. ನಮ್ಮ ತಂಡ 88 ಜನರ ಜೀವಗಳನ್ನು ಉಳಿಸಿತು. ಇಡೀ ಗ್ರಾಮದ ಜನರು ನೂರಾರು ಜನರನ್ನು ಉಳಿಸಿದರು."