ನವದೆಹಲಿ:ಭಾರತೀಯರನ್ನು ನಿಂದಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕವಾಡಿದ ಮಾಲ್ಡೀವ್ಸ್ ರಾಜಕಾರಣಿ ಜಾಹಿದ್ ರಮೀಜ್ ಮತ್ತು ಅಲ್ಲಿನ ಸಚಿವೆ ಮರಿಯಮ್ ಶಿಯುನಾ ಅವರ ಕೃತ್ಯಕ್ಕೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಲಕ್ಷದ್ವೀಪವನ್ನು ಪ್ರವಾಸಿ ತಾಣವಾಗಿ ಬಿಂಬಿಸಿದ್ದ ಪ್ರಧಾನಿ ಮೋದಿ ವಿರುದ್ಧ ಅಣಕವಾಡಿದ್ದು ಮಾತ್ರವಲ್ಲದೆ, ಮಾಲ್ಸಿವ್ಸ್ನ ಈ ರಾಜಕಾರಣಿಗಳು ಭಾರತೀಯರ ವಿರುದ್ಧ ಜನಾಂಗೀಯ ನಿಂದನೆಯನ್ನೂ ಮಾಡಿದ್ದಾರೆ. ಸದ್ಯ ಇವರ ಹೇಳಿಕೆಗಳಿಗೆ ಸಾಮಾಜಿಕ ಮಾಧ್ಯಮದಲ್ಲೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, #BoycottMaldives ಟ್ರೆಂಡಿಂಗ್ ಆಗುತ್ತಿದೆ. ಅಲ್ಲದೆ ಸೆಲೆಬ್ರಿಟಿಗಳು ಸೇರಿದಂತೆ ಹಲವಾರು ಭಾರತೀಯರು ಮಾಲ್ಡಿವ್ಸ್ಗೆ ತಮ್ಮ ಯೋಜಿತ ಪ್ರವಾಸಗಳನ್ನು ರದ್ದುಗೊಳಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಹಲವಾರು ಬಳಕೆದಾರರು ಸುಂದರವಾದ ಲಕ್ಷದ್ವೀಪ ದ್ವೀಪಗಳ ಫೋಟೋಗಳನ್ನು ಶೇರ್ ಮಾಡುತ್ತಿದ್ದು, ಮಾಲ್ಡೀವ್ಸ್ ನಾಯಕರ ಭಾರತ ವಿರೋಧಿ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಸೆಲೆಬ್ರಿಟಿಗಳು ಭಾರತೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತೆ ಕರೆ ನೀಡಿದ್ದಾರೆ.
ಬಾಲಿವುಡ್ ನಟ ಜಾನ್ ಅಬ್ರಹಾಂ ಲಕ್ಷದ್ವೀಪ ದ್ವೀಪಗಳಿಗೆ ಭೇಟಿ ನೀಡುವಂತೆ ಪ್ರವಾಸಿಗರಿಗೆ ಶಿಫಾರಸು ಮಾಡಿದ್ದಾರೆ. "ಭಾರತೀಯರ ಅದ್ಭುತ ಆತಿಥ್ಯದೊಂದಿಗೆ, ಅತಿಥಿ ದೇವೋ ಭವ ಕಲ್ಪನೆ ಮತ್ತು ಅನ್ವೇಷಿಸಲು ವಿಶಾಲವಾದ ಸಮುದ್ರ ಜೀವಿಗಳು. ಲಕ್ಷದ್ವೀಪವು ನೀವು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ" ಎಂದು ಅವರು ಬರೆದಿದ್ದಾರೆ.
ಪ್ರೊಗ್ರೆಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ನ (ಪಿಪಿಎಂ) ಸದಸ್ಯ ರಮೀಜ್, ಹಣ ಸಂಪಾದಿಸಲು ಭಾರತವು ಶ್ರೀಲಂಕಾದಂಥ ಸಣ್ಣ ಆರ್ಥಿಕತೆಯನ್ನು ನಕಲು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿಯವರ ಭೇಟಿ ಮತ್ತು ಸ್ನೋರ್ಕೆಲಿಂಗ್ನ ಚಿತ್ರಗಳು ವ್ಯಾಪಕ ಗಮನ ಸೆಳೆದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಜನ ಲಕ್ಷದ್ವೀಪ ಮತ್ತು ಮಾಲ್ಡೀವ್ಸ್ಗಳನ್ನು ಹೋಲಿಸಿ, ಮಾಲ್ಡೀವ್ಸ್ಗಿಂತ ಲಕ್ಷದ್ವೀಪವೇ ಸುಂದರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಕೆಲ ದಿನಗಳಲ್ಲಿ ಲಕ್ಷದ್ವೀಪದ ಬಗ್ಗೆ ಇಂಟರ್ನೆಟ್ನಲ್ಲಿ ಜನ ಅತ್ಯಧಿಕ ಹುಡುಕಾಟ ನಡೆಸಿದ್ದಾರೆ.
ಜನವರಿ 5 ರಂದು ರಮೀಜ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯಿಂದ ಮಾಲ್ಡೀವ್ಸ್ಗೆ ಹಿನ್ನಡೆ ಎಂದು ಬರೆಯಲಾದ ಟ್ವೀಟ್ ಒಂದನ್ನು ಶೇರ್ ಮಾಡಿದ್ದ ಅವರು, "ಈ ಕ್ರಮ ಅದ್ಭುತವಾಗಿದೆ. ಆದಾಗ್ಯೂ, ನಮ್ಮೊಂದಿಗೆ ಸ್ಪರ್ಧಿಸುವ ಕಲ್ಪನೆ ಕೇವಲ ಭ್ರಮೆಯಾಗಿದೆ. ನಾವು ನೀಡುವ ಉತ್ಕೃಷ್ಟ ಸೇವೆ ಅವರು ಒದಗಿಸಲು ಸಾಧ್ಯವೇ ಇಲ್ಲ. ಅವರು ಅಷ್ಟು ಸ್ವಚ್ಛವಾಗಿರಲು ಸಾಧ್ಯವಿಲ್ಲ. ಅವರ ಕೋಣೆಗಳು ಇಡೀ ದಿನ ಗಬ್ಬು ನಾರುತ್ತವೆ" ಎಂದು ಪ್ರತಿಕ್ರಿಯಿಸಿದ್ದರು. ಅವರಲ್ಲದೆ, ಸಚಿವೆ ಮರಿಯಮ್ ಶಿಯುನಾ ಕೂಡ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಅವರ ನಿಂದನಾತ್ಮಕ ಎಕ್ಸ್ ಪೋಸ್ಟ್ಗಳು ಸದ್ಯ ಡಿಲೀಟ್ ಆಗಿವೆ.
ಇದನ್ನೂ ಓದಿ : ದೆಹಲಿ ತಲಾ ಆದಾಯ ಹೆಚ್ಚಳ; ಸರ್ಕಾರದ ಸಾಧನೆ ಕೊಂಡಾಡಿದ ಸಿಎಂ ಕೇಜ್ರಿವಾಲ್