ದುಡು(ರಾಜಸ್ಥಾನ) :ಮೂವರು ಸಹೋದರಿಯರು, ಇಬ್ಬರು ಮಕ್ಕಳು ಸೇರಿ ಐವರ ಮೃತದೇಹ ಬಾವಿವೊಂದರಲ್ಲಿ ಪತ್ತೆಯಾಗಿದೆ. ರಾಜಸ್ಥಾನದ ದುಡುದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಮೃತ ಮಹಿಳೆಯರ ಪೈಕಿ ಇಬ್ಬರು ಗರ್ಭಿಣಿಯರಾಗಿದ್ದರೆಂಬುದು ಗೊತ್ತಾಗಿದೆ. ವರದಕ್ಷಿಣೆಗೋಸ್ಕರ ಇವರನ್ನ ಕೊಲೆ ಮಾಡಿ, ಬಾವಿಯಲ್ಲಿ ಎಸೆದಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಮೃತ ಸಹೋದರಿಯರನ್ನ ಕಾಳುದೇವಿ(25), ಮಮತಾ(23) ಹಾಗೂ ಕಮಲೇಶಿ(20) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳಲ್ಲಿ ಒಂದು ನಾಲ್ಕು ವರ್ಷ ಹಾಗೂ ಮತ್ತೊಂದು ಕೇವಲ 27 ದಿನದ ಮಗು ಎಂದು ತಿಳಿದು ಬಂದಿದೆ. ಇವೆರಡು ಕಾಳುದೇವಿ ಮಕ್ಕಳೆಂದು ಹೇಳಲಾಗುತ್ತಿದೆ. ಮಮತಾ ಹಾಗೂ ಕಮಲೇಶಿ ಗರ್ಭಿಣಿಯರಾಗಿದ್ದರು.
ಮನೆಯಿಂದ ಎರಡು ಕಿಲೋಮೀಟರ್ ದೂರದ ಬಾವಿಯಲ್ಲಿ ಇವರೆಲ್ಲರ ಶವಗಳು ಪತ್ತೆಯಾಗಿವೆ. ಈಗಾಗಲೇ ಎಲ್ಲರ ಮೃತದೇಹಗಳನ್ನ ಬಾವಿಯಿಂದ ಹೊರ ತೆಗೆಯಲಾಗಿದೆ. ವರದಕ್ಷಿಣೆ ವಿಚಾರವಾಗಿ ಗಂಡನ ಮನೆಯವರು ಇವರ ಕೊಲೆ ಮಾಡಿ, ಬಾವಿಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:KGF- 2 ಚಿತ್ರದ ರಾಕಿ ಭಾಯ್ ಪ್ರಭಾವ.. ಪ್ಯಾಕ್ ಸಿಗರೇಟ್ ಸೇದಿ ಆಸ್ಪತ್ರೆ ಸೇರಿದ ಬಾಲಕ!
ಮೇ 25ರಂದು ದುಡು ಪೊಲೀಸ್ ಠಾಣೆಯಲ್ಲಿ ಮೂವರು ಸಹೋದರಿಯರು ಕಾಣೆಯಾದ ಬಗ್ಗೆ ಎಫ್ಐಆರ್ ದಾಖಲಾಗಿತ್ತು. ಈ ಮಧ್ಯೆ ಮೃತನ ಸಹೋದರ ವರದಕ್ಷಿಣೆಗೋಸ್ಕರ ತಮ್ಮ ಸಹೋದರಿಯರಿಗೆ ಅತ್ತೆಯಂದಿರು ಹಿಂಸೆ ನೀಡಿದ್ದರ ಬಗ್ಗೆ ಪತ್ರ ಬರೆದು, ಆರೋಪ ಮಾಡಿದ್ದರು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು, ಎಲ್ಲರ ಮೃತದೇಹಗಳನ್ನ ಬಾವಿಯಿಂದ ಹೊರ ತೆಗೆದಿದ್ದಾರೆ. ಶವಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.