ನವದೆಹಲಿ:ಕೇಂದ್ರ ಸರ್ಕಾರದ ದುರಾಡಳಿತ, ಬೆಲೆ ಏರಿಕೆ, ಆರ್ಥಿಕ ನೀತಿಗಳು ಸೇರಿದಂತೆ ಮೋದಿ ವೈಫಲ್ಯದ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸುತ್ತಿದೆ.
ಕಾಂಗ್ರೆಸ್ನ ಈ ಯಾತ್ರೆ ಇಂದು ಮೂರನೇ ದಿನವನ್ನು ಪೂರೈಸಿದೆ. ಈ ನಡುವೆ ಭಾರತ ಜೋಡೋ ಯಾತ್ರೆಯ ನೇತಾರ ರಾಹುಲ್ ಗಾಂಧಿ ಅವರು ಧರಿಸಿದ್ದ ಟೀ ಶರ್ಟ್ ಭಾರಿ ಸದ್ದು ಮಾಡುತ್ತಿದೆ. ಇದು ಬಿಜೆಪಿಯವರ ಕಣ್ಣಿಗೆ ಬಿದ್ದಿದೆ. ಅಷ್ಟೇ ಅಲ್ಲ ಇದನ್ನು ಟ್ರೋಲ್ ಕೂಡಾ ಮಾಡಲಾಗುತ್ತಿದೆ. ರಾಹುಲ್ ಧರಿಸಿದ್ದ ಟೀ ಶರ್ಟ್ನ ಬೆಲೆ ಬರೋಬ್ಬರಿ 41,000 ರೂಪಾಯಿಗಳಿಗಿಂತ ಹೆಚ್ಚು ಅಂತೆ. ಹೀಗಂತಾ ಬಿಜೆಪಿ ಶುಕ್ರವಾರ ಆರೋಪಿಸಿದ್ದು ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
"ಭಾರತ್, ದೇಖೋ," ಎಂದು ಭಾರತೀಯ ಜನತಾ ಪಕ್ಷವು ತನ್ನ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಿ ರಾಹುಲ್ ನಡೆಯನ್ನು ಟೀಕಿಸಿದೆ. ಈ ಸಂಬಂಧದ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದೆ. ಒಂದು ಕಡೆ ರಾಹುಲ್ ಗಾಂಧಿ ಟೀ ಶರ್ಟ್ ಧರಿಸಿರುವ ಚಿತ್ರ, ಇನ್ನೊಂದರಲ್ಲಿ ಅವರು ಧರಿಸಿರುವ ಟಿ-ಶರ್ಟ್ನ ಬೆಲೆಯನ್ನು ತೋರಿಸುವ ಚಿತ್ರವನ್ನು ಪೋಸ್ಟ್ ಮಾಡಿ ಪ್ರಶ್ನೆ ಮಾಡಿದೆ.
ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ನವರ ತಿರುಗೇಟು:ಬ್ಲೂಬೆರ್ರಿ ಟೀ ಶರ್ಟ್ ಬೆಲೆ 41,257 ರೂ. ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿಯ ಈ ಟ್ವೀಟ್ಗೆ ಕಾಂಗ್ರೆಸಿಗರು ಗರಂ ಆಗಿದ್ದಾರೆ. ಕಾಂಗ್ರೆಸ್ ಯಾತ್ರೆಯಿಂದ ಬಿಜೆಪಿಗರು ಗಲಿಬಿಲಿಗೊಂಡಿದ್ದು, ಈ ತರಹದ ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಇನ್ನೊಬ್ಬರು ಬಿಜೆಪಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿ ಇದು ಸಾರ್ವಜನಿಕರ ಹಣ ಅಲ್ಲ ಸ್ವಂತದ್ದು ಎಂದು ಉತ್ತರ ಕೊಟ್ಟಿದ್ದಾರೆ.
ಇದನ್ನು ಓದಿ:ರಾಹುಲ್ ಗಾಂಧಿ ಸಾರಥ್ಯದಲ್ಲಿ 3ನೇ ದಿನಕ್ಕೆ ಕಾಲಿಟ್ಟ 'ಭಾರತ್ ಜೋಡೋ ಯಾತ್ರೆ'