ನವದೆಹಲಿ:ಪಂಚ ರಾಜ್ಯಗಳ ಚುನಾವಣೆ ಪೈಕಿ ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲು ಮಾಡಿದೆ. ಇದೀಗ ಹೊಸ ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದೆ. ಇದರ ಬೆನ್ನಲ್ಲೇ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ಕೇಂದ್ರ ವೀಕ್ಷಕರ ನೇಮಕ ಮಾಡಲಾಗಿದೆ.
ಬಿಜೆಪಿಯ ಹಿರಿಯ ನಾಯಕ, ಗೃಹ ಸಚಿವ ಅಮಿತ್ ಶಾ ಉತ್ತರ ಪ್ರದೇಶದಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ಮೇಲ್ವಿಚಾರಣೆ ಹೊತ್ತುಕೊಂಡಿದ್ದು, ವೀಕ್ಷಕರಾಗಿ ನೇಮಕಗೊಂಡಿದ್ದಾರೆ.
ರಾಜನಾಥ್ ಸಿಂಗ್ ಉತ್ತರಾಖಂಡ್, ನಿರ್ಮಲಾ ಸೀತಾರಾಮನ್ ಮಣಿಪುರ, ನರೇಂದ್ರ ಸಿಂಗ್ ತೋಮರ್ ಗೋವಾದಲ್ಲಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ನೇಮಕವಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶ, ಗೋವಾ, ಮಣಿಪುರ ಹಾಗೂ ಉತ್ತರಾಖಂಡದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಸರ್ಕಾರ ರಚನೆ ಮಾಡುವ ಕಸರತ್ತು ನಡೆಸುತ್ತಿವೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಹೋಳಿ ಹಬ್ಬ ಮುಗಿದ ಬಳಿಕ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಹೊಸ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ತಿಳಿದುಬಂದಿದೆ.