ನವದೆಹಲಿ :ದೇಶದಲ್ಲಿ ಒಮಿಕ್ರಾನ್ ಭೀತಿ ಹೆಚ್ಚಾಗುತ್ತಿದ್ದಂತೆ ಉತ್ತರಪ್ರದೇಶ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೆ, ಇದೇ ವಿಚಾರವಾಗಿ ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್ ಮಾಡಿ ಯುಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉತ್ತರಪ್ರದೇಶದಲ್ಲಿ ಅಧಿಕಾರ ನಡೆಸುತ್ತಿರುವ ಯೋಗಿ ಆದಿತ್ಯನಾಥ್ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಆದರೆ, ಮುಂದಿನ ವರ್ಷದ ಆರಂಭದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ಮೇಲಿಂದ ಮೇಲೆ ಬೃಹತ್ ಚುನಾವಣಾ ಪ್ರಚಾರ ಸಭೆ ನಡೆಸುತ್ತಿದೆ. ಇದೇ ವಿಚಾರವನ್ನಿಟ್ಟುಕೊಂಡು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಉತ್ತರಪ್ರದೇಶದಲ್ಲಿ ರಾತ್ರಿ ಸಮಯದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೆ, ಚುನಾವಣಾ ಪ್ರಚಾರಕ್ಕಾಗಿ ಅಥವಾ ದೊಡ್ಡ ಮಟ್ಟದ ರಾಜಕೀಯ ಸಮಾವೇಶಕ್ಕಾಗಿ ಬೆಳಗ್ಗೆ ಲಕ್ಷಾಂತರ ಜನರನ್ನ ಒಟ್ಟಿಗೆ ಕರೆತರಲಾಗುತ್ತಿದೆ.
ಇದು ಜನಸಾಮಾನ್ಯರ ಗ್ರಹಿಕೆಗೆ ಮೀರಿದ್ದು ಎಂದಿದ್ದಾರೆ. ಉತ್ತರಪ್ರದೇಶದ ಈ ವ್ಯವಸ್ಥೆ ನೋಡಿದರೆ ಬರುವ ದಿನಗಳಲ್ಲಿ ಖಂಡಿತವಾಗಿ ದೊಡ್ಡ ಮಟ್ಟದಲ್ಲಿ ಒಮಿಕ್ರಾನ್ ಹರಡುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ ಎಂದಿದ್ದಾರೆ.
ಇದನ್ನೂ ಓದಿರಿ:ಪಂಜಾಬ್ ಚುನಾವಣೆಗೂ ಮುನ್ನ AAPಗೆ ಆನೆಬಲ.. ಚಂಡೀಗಢ ಮುನ್ಸಿಪಲ್ ಎಲೆಕ್ಷನ್ನಲ್ಲಿ ಭರ್ಜರಿ ಜಯಭೇರಿ
ಒಮಿಕ್ರಾನ್ ತಡೆಯಲು ಉತ್ತರಪ್ರದೇಶದಲ್ಲಿ ಡಿಸೆಂಬರ್ 25ರಿಂದ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೆ, ಮೇಲಿಂದ ಮೇಲೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಕೇಂದ್ರ ಸಚಿವರು ಉತ್ತರಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ.
ದೊಡ್ಡ ದೊಡ್ಡ ಚುನಾವಣಾ ಪ್ರಚಾರ ಸಭೆ ನಡೆಸಲಾಗುತ್ತಿದೆ. ಇದೇ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಸಂಸದ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ವಿಶೇಷವೆಂದರೆ ಈ ಹಿಂದೆ ಕೂಡ ಕೃಷಿ ಕಾಯ್ದೆ ಸೇರಿದಂತೆ ಅನೇಕ ವಿಚಾರವಾಗಿ ವರುಣ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಉದಾಹರಣೆಗಳಿವೆ.