ಕರ್ನಾಟಕ

karnataka

ETV Bharat / bharat

ಹಣಕ್ಕಾಗಿ ಪ್ರಶ್ನೆ ಕೇಸ್​: ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆಗೆ ಲೋಕಪಾಲ್ ಆದೇಶಿಸಿದೆ.. ಬಿಜೆಪಿ - CBI probe against Mahua Moitra

ಸಂಸತ್ತಿನಲ್ಲಿ ಪ್ರಶ್ನೆ ಮಾಡಲು ಲಂಚ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆ ನಡೆಸಲು ಲೋಕಪಾಲ್​ ಆದೇಶಿಸಿದೆ ಎಂದು ಬಿಜೆಪಿ ಹೇಳಿದೆ.

ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ

By ETV Bharat Karnataka Team

Published : Nov 8, 2023, 6:01 PM IST

ನವದೆಹಲಿ:ಹಣಕ್ಕಾಗಿ ಪ್ರಶ್ನೆ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧದ ತನಿಖೆಯನ್ನು ಲೋಕಪಾಲ್​ ಸಂಸ್ಥೆ ಸಿಬಿಐಗೆ ನೀಡಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ ಹೇಳಿದರು. ಆದರೆ, ಇದಕ್ಕೆ ಇದನ್ನು ನಿರಾಕರಿಸಿರುವ ಟಿಎಂಸಿ ಸಂಸದೆ, ಮೊದಲು ಲೋಕಪಾಲ್​ ಸಂಸ್ಥೆ ಅಸ್ತಿತ್ವದಲ್ಲಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಸವಲತ್ತುಗಳನ್ನು ಪಡೆದುಕೊಂಡು, ಅವರ ನಿರ್ದೇಶನದಂತೆ ಅದಾನಿ ಗ್ರೂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಲೋಕಸಭೆಯಲ್ಲಿ ಟಿಎಂಸಿ ಸಂಸದೆ ಮೊಯಿತ್ರಾ ಅವರು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್​ ದುಬೆ ದೂರಿದ್ದಾರೆ. ಮೊಯಿತ್ರಾ ಅವರ ವಿರುದ್ಧ ಲೋಕಸಭೆ ನೈತಿಕ ಸಮಿತಿ ವಿಚಾರಣೆ ನಡೆಸುತ್ತಿರುವ ಮಧ್ಯೆ ಈ ಮಹತ್ವದ ಬೆಳವಣಿಗೆ ನಡೆದಿದೆ.

ತಮ್ಮ ಅಧಿಕೃತ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ದುಬೆ ಅವರು, ನನ್ನ ದೂರಿನ ಮೇರೆಗೆ ಲೋಕಪಾಲ್ ಸಂಸ್ಥೆ ಇಂದು (ಬುಧವಾರ) ರಾಷ್ಟ್ರೀಯ ಭದ್ರತೆಯನ್ನು ಭ್ರಷ್ಟಾಚಾರಕ್ಕೆ ಅಡವಿಟ್ಟ ಮಹುವಾ ಮೊಯಿತ್ರಾ ಅವರ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದೆ ಎಂದು ಹೇಳಿದ್ದಾರೆ. ಆದರೆ, ಲೋಕಪಾಲದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಲೋಕಪಾಲ್​ ಅಸ್ತಿತ್ವದಲ್ಲಿದೆಯೇ-ಮಹುವಾ:ತಮ್ಮ ವಿರುದ್ಧ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಾಗಿದೆ ಎಂಬ ಮಾಹಿತಿಯನ್ನು ಪ್ರಶ್ನಿಸಿರುವ ಟಿಎಂಸಿ ಸಂಸದೆ ಮಹುವಾ, ಈ ಸರ್ಕಾರದಲ್ಲಿ ಲೋಕಪಾಲ್ ಅಸ್ತಿತ್ವದಲ್ಲಿದೆ ಎಂದು ತಿಳಿದುಕೊಂಡು ಸಂತೋಷವಾಗಿದೆ. ನನ್ನ ವಿರುದ್ಧ ಸಿಬಿಐ ತನಿಖೆ ನಡೆಸಲಿದೆ ಎಂಬುದಕ್ಕೆ ಲೋಕಪಾಲ್ ಕಚೇರಿ ಅಧಿಕೃತ ಮಾಹಿತಿ ನೀಡಿಲ್ಲ ಯಾಕೆ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.

ನನಗೆ ಕರೆ ಮಾಡುವ ಮಾಧ್ಯಮಗಳಿಗೆ ನನ್ನ ಉತ್ತರವಿದು. 13,000 ಕೋಟಿ ಅದಾನಿ ಕಲ್ಲಿದ್ದಲು ಹಗರಣದ ಕುರಿತು ಸಿಬಿಐ ಮೊದಲು ಎಫ್‌ಐಆರ್ ದಾಖಲಿಸಲಿ. ಭಾರತದ ಬಂದರುಗಳು, ವಿಮಾನ ನಿಲ್ದಾಣಗಳನ್ನು ಎಫ್‌ಪಿಐ ಒಡೆತನದ (ಇಂಕ್ ಚೈನೀಸ್ ಮತ್ತು ಯುಎಇ) ಅದಾನಿ ಸಂಸ್ಥೆಗಳು ಹೇಗೆ ಖರೀದಿಸುತ್ತಿವೆ ಎಂಬುದನ್ನು ಮೊದಲು ಸಿಬಿಐ ತನಿಖೆ ನಡೆಸಿ ನಂತರ ನನ್ನ ವಿರುದ್ಧ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಅವರು ಅಕ್ಟೋಬರ್ 21 ರಂದು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಲು ಹಣ ಪಡೆದಿದ್ದಾರೆ ಎಂದು ಆರೋಪಿಸಿ ಟಿಎಂಸಿ ಸಂಸದೆ ಮೊಯಿತ್ರಾ ವಿರುದ್ಧ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಲೋಕಪಾಲ್‌ಗೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ:'ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ' ಪ್ರಕರಣದಲ್ಲಿ ಒಂಟಿಯಾದ ಸಂಸದೆ ಮಹುವಾ ಮೊಯಿತ್ರಾ; ಅಂತರ ಕಾಯ್ದುಕೊಂಡ ಟಿಎಂಸಿ

ABOUT THE AUTHOR

...view details