ಬಿಹಾರ: ಬಿಹಾರದ ಮಾಧೇಪುರದಲ್ಲಿ ಶುಕ್ರವಾರ ರಾತ್ರಿ ಬಿಜೆಪಿ ಮುಖಂಡನ ಹತ್ಯೆಯಾಗಿದೆ. ಮಾಧೇಪುರದ ಗ್ವಾಲ್ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಶಹಾಪುರ್ನಲ್ಲಿ ವಿಪಿನ್ ಕುಮಾರ್ ಸಿಂಗ್ಗೆ ದುಷ್ಕರ್ಮಿಗಳು ಗುಂಡಿಕ್ಕಿದ್ದಾರೆ. ಗುಂಡು ತಗುಲಿ ವಿಪಿನ್ ಕುಮಾರ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ವಿಪಿನ್ ಕುಮಾರ್ ಸಿಂಗ್ ತಮ್ಮ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಗ್ವಾಲ್ಪಾರಾ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆ ಪ್ರಾರಂಭಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೂರು ಬೈಕ್ಗಳಲ್ಲಿ ಬಂದ 6 ಮಂದಿ ಕ್ರಿಮಿನಲ್ಗಳು ಈ ಕೃತ್ಯ ಎಸಗಿದ್ದಾರೆ. ಟಿಕ್ಕರ್ ತೊಲ ಮೋರ್ ಸಮೀಪದ ಮೋರಿ ಬಳಿ 5 ಮಂದಿ ಕ್ರಿಮಿನಲ್ಗಳು ಹೊಂಚು ಹಾಕಿದ್ದರು. ಓರ್ವ ವಿಪಿನ್ ಕುಮಾರ್ ಸಿಂಗ್ ಅವರ ಕಾರನ್ನು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾನೆ. ಮೋರಿ ಸಮೀಪ ತಲುಪಿದ ತಕ್ಷಣ ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗ್ವಾಲ್ಪಾರಾ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಪೆನ್ನು, ಪೆನ್ಸಿಲ್ ಹಿಡಿಯಬೇಕಾದ ಮಕ್ಕಳ ಕೈಗೆ ಹಾರೆ, ಕೊಡಲಿ.. ಮುಖ್ಯಶಿಕ್ಷಕ ನಡೆಗೆ ಖಂಡನೆ - ವಿಡಿಯೋ ವೈರಲ್
ಪೊಲೀಸರು ಘಟನೆ ನಡೆದ ಸ್ಥಳದಿಂದ ಆರು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಮೃತ ದೇಹದಿಂದ ಎರಡು ಗುಂಡುಗಳನ್ನು ಹೊರ ತೆಗೆಯಲಾಗಿದೆ.