ಭೋಪಾಲ್(ಮಧ್ಯಪ್ರದೇಶ):ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್ ರಾವ್ ಅವರು ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳು ನನ್ನ ಜೇಬಿನಲ್ಲಿವೆ ಎಂದು ಹೇಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ರಾವ್ ಅವರ ಹೇಳಿಕೆ ಮಧ್ಯಪ್ರದೇಶದಲ್ಲಿ ವಾಗ್ವಾದಕ್ಕೆ ಕಾರಣವಾಗಿದ್ದು, ಕ್ಷಮೆ ಯಾಚಿಸಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ. ಇದೇ ವೇಳೆ, ಆಡಳಿತ ಪಕ್ಷ ಈ ಎರಡು ಸಮುದಾಯಗಳ ಮೇಲೆ ಹಕ್ಕು ಸಾಧಿಸಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.
ಮಧ್ಯಪ್ರದೇಶ ಬಿಜೆಪಿ ರಾಜ್ಯ ಉಸ್ತುವಾರಿಯೂ ಆಗಿರುವ ರಾವ್, ಭೋಪಾಲ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲಾ ವಿಭಾಗಗಳಲ್ಲೂ ಕಾಂಗ್ರೆಸ್ ದ್ರೋಹ ಮಾಡಿರುವುದಲ್ಲದೇ, ವಿಭಜಿಸಿದೆ. ಪರಿಶಿಷ್ಟ ಪಂಗಡದವರು ಹಿಂದುಳಿದಿದ್ದರೆ ಏಕೈಕ ಕಾರಣ ಕಾಂಗ್ರೆಸ್ ಎಂದು ದೂರಿದ್ದಾರೆ.
ಬಿಜೆಪಿಯು ಅಭಿವೃದ್ಧಿಯ ಅಂಚಿನಲ್ಲಿರುವ ಸಮುದಾಯಗಳ ಮೇಲೆ ತನ್ನ ಗುರಿ ಕೇಂದ್ರೀಕರಿಸಿದೆ. ಇದು ವೋಟ್ ಬ್ಯಾಂಕ್‌ಗಾಗಿ ಅಲ್ಲ, ಆದರೆ ಹಿಂದುಳಿದಿರುವಿಕೆ, ಉದ್ಯೋಗ ಹಾಗೂ ಶಿಕ್ಷಣದ ಕೊರತೆಯನ್ನು ನೀಗಿಸುವುದು ಎಂದು ಪ್ರತಿಪಾದಿಸಿದ್ದಾರೆ.
ಬ್ರಾಹ್ಮಣರು ಇದ್ದಾಗ ನೀವು ನಮ್ಮನ್ನು ಬ್ರಾಹ್ಮಣರ ಪಕ್ಷ ಎಂದು ಕರೆದಿದ್ದೀರಿ, ಬನಿಯಾಗಳು ಇದ್ದಾಗ ನೀವು ನಮ್ಮನ್ನು ಬನಿಯಾ ಪಾರ್ಟಿ ಎಂದು ಕರೆದಿದ್ದೀರಿ ಎಂದು ಮಾಧ್ಯಮದವರ ಪ್ರಶ್ನೆಗೆ ಮುರಳೀಧರ್ ರಾವ್ ಉತ್ತರಿಸಿದರು.