ಕರ್ನಾಟಕ

karnataka

By

Published : Apr 30, 2023, 7:19 AM IST

ETV Bharat / bharat

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡನಿಗೆ ಗುಂಡಿಕ್ಕಿ ಹತ್ಯೆ

ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಬಿಜೆಪಿ ನಾಯಕ ಗುಂಡೇಟಿಗೆ ಬಲಿಯಾಗಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ವೈಯಕ್ತಿಕ ದ್ವೇಷ ಕಾರಣ ಎಂದು ಹೇಳಲಾಗಿದೆ.

ಪಶ್ಚಿಮಬಂಗಾಳದಲ್ಲಿ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ
ಪಶ್ಚಿಮಬಂಗಾಳದಲ್ಲಿ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

ಅಸನ್ಸೋಲ್ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಬಿಜೆಪಿ ನಾಯಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕಾರಿನೊಳಗೆ ಇದ್ದ ಸ್ಥಿತಿಯಲ್ಲೇ ಗುಂಡು ಹಾರಿಸಿ ಕೊಲೆಗೈಯ್ಯಲಾಗಿದೆ. ರಾಷ್ಟ್ರೀಯ ಹೆದ್ದಾರಿ-19 ರ ರಸ್ತೆ ಬದಿಯಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ರಾಜೇಂದ್ರ ಶಾ ಅವರ ಶವ ಪತ್ತೆಯಾಗಿದೆ.

ಅಸನ್ಸೋಲ್‌ನ ಜಮುರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬೋಗ್ರಾ ಕಾಳಿಮಂದಿರದ ಬಳಿ ಶನಿವಾರ ಬೆಳಗ್ಗೆ ಕಾರು ನಿಂತಿತ್ತು. ಈ ಜಾಗದಲ್ಲಿ ಕಾರು ತುಂಬಾ ಹೊತ್ತು ನಿಂತಿದ್ದರಿಂದ ಅನುಮಾನಗೊಂಡ ದಾರಿಹೋಕರು ಪರಿಶೀಲಿಸಿದಾಗ ಒಳಗೆ ವ್ಯಕ್ತಿಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.

ತಕ್ಷಣವೇ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಾರಿನ ಬಾಗಿಲು ತೆರೆದು ನೋಡಿದಾಗ ಬಿಜೆಪಿ ಮುಖಂಡ ರಾಜೇಂದ್ರ ಶಾ (40) ಸಾವನ್ನಪ್ಪಿರುವುದು ಗೊತ್ತಾಗಿದೆ. ಗುಂಡೇಟಿನಿಂದ ಜರ್ಜರಿತವಾಗಿದ್ದ ಮೃತದೇಹವನ್ನು ಮೊದಲು ಗುರುತಿಸಲಾಗಿಲ್ಲ. ಬಳಿಕ ಅದು ಬಿಜೆಪಿ ಮುಖಂಡ ರಾಜೇಂದ್ರ ಎಂದು ಪತ್ತೆ ಮಾಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಸನ್ಸೋಲ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಕಾರಿನಲ್ಲಿ ಖಾಲಿ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಮಾಹಿತಿ ಪಡೆದ ಅಸನ್ಸೋಲ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಗ್ನಿಮಿತ್ರ ಪೌಲ್, ಬಿಜೆಪಿ ಸದಸ್ಯ ಕೃಷ್ಣೇಂದು ಮುಖೋಪಾಧ್ಯಾಯ, ಅಸನ್ಸೋಲ್ ಸಂಘಟನಾ ಜಿಲ್ಲಾಧ್ಯಕ್ಷ ದಿಲೀಪ್ ಡೇ ಮತ್ತಿತರರು ಸ್ಥಳಕ್ಕೆ ಆಗಮಿಸಿ ತಮ್ಮ ಪಕ್ಷದ ನಾಯಕನ ಸಾವಿನ ಬಗ್ಗೆ ಆಡಳಿತ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಸಿಕ್ಕಿರುವ ಮಾಹಿತಿಯ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ವೈಯಕ್ತಿಕ ದ್ವೇಷದಿಂದ ಬಿಜೆಪಿ ಮುಖಂಡನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

2020ರಲ್ಲಿ ಎರಡು ತಂಡಗಳ ನಡುವಿನ ಗಲಾಟೆಯಲ್ಲಿ ಬಿಜೆಪಿ ಬೂತ್​ ಕಾರ್ಯದರ್ಶಿಯನ್ನು ಹತ್ಯೆ ಮಾಡಲಾಗಿತ್ತು. ತೂಫಾನ್ ಗಂಜ್​ನ ನಕ್ಕತಿ ಗಚ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಕಾಲಾಚಂದ್ ಕರ್ಮಾಕರ್​ ಮೃತ ವ್ಯಕ್ತಿ. ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಮೃತನ ಕುಟುಂಬಸ್ಥರು ಮತ್ತು ಬಿಜೆಪಿ ನಾಯಕರು ಆರೋಪಿಸಿದ್ದರು. ಪ್ರಕರಣ ಸಂಬಂಧ ತೂಫಾನ್​ ಗಂಜ್ ಪೊಲೀಸರು ಟಿಎಂಸಿ ಕಾರ್ಯಕರ್ತ ಕಲಮ್ ಬರ್ಮನ್ ಎಂಬಾತನನ್ನು ಬಂಧಿಸಲಾಗಿತ್ತು.

ತ್ರಿಪುರಾದಲ್ಲಿ ಹತ್ಯೆ:ತ್ರಿಪುರಾದಲ್ಲಿಯೂ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ನಾಯಕ ಕೃಪಾ ರಂಜನ್ ಚಕ್ಮಾ ಗುಂಡೇಟಿಗೆ ಬಲಿಯಾಗಿದ್ದರು. ಧಲೈ ಜಿಲ್ಲೆಯ ಮಾಣಿಕ್​ಪುರದಲ್ಲಿನ ಕೃಪಾ ರಂಜನ್ ಚಕ್ಮಾ ಅವರ ಮನೆಯ ಮೇಲೆ ಮೂವರು ಬಂದೂಕುಧಾರಿಗಳು ದಾಳಿ ನಡೆಸಿದ್ದರು.

ದುಷ್ಕರ್ಮಿಗಳು ಬುಡಕಟ್ಟು ನಾಯಕ ಚಕ್ಮಾರ ಮೇಲೆ ಗುಂಡಿನ ಮಳೆಗರೆದಿದ್ದರು. ಇದರಿಂದ ಸ್ಥಳದಲ್ಲೇ ಬಿಜೆಪಿ ನಾಯಕ ಅಸುನೀಗಿದ್ದ. ಇದೊಂದು ರಾಜಕೀಯ ಪಿತೂರಿ ಎಂದು ಬಿಜೆಪಿ ಆರೋಪಿಸಿತ್ತು.

ಇದನ್ನೂ ಓದಿ:ಪ್ರವೀಣ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, ಮನೆ ನಿರ್ಮಿಸಿ ಕೊಡಲು ಬಿಜೆಪಿ ನಿರ್ಧಾರ

ABOUT THE AUTHOR

...view details