ಕರ್ನಾಟಕ

karnataka

ETV Bharat / bharat

ಬಿಜೆಪಿ 10 ವರ್ಷಗಳ ಆಡಳಿತ ವೈಫಲ್ಯ ಮರೆಮಾಚಲು ಭಾವನಾತ್ಮಕ ವಿಷಯ ಎತ್ತುತ್ತಿದೆ: ಕಾಂಗ್ರೆಸ್ ಅಧ್ಯಕ್ಷ ಖರ್ಗೆ

ಕಳೆದ 10 ವರ್ಷಗಳಲ್ಲಿ ತನ್ನ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿಯು ಭಾವನಾತ್ಮಕ ವಿಷಯಗಳನ್ನು ಜನರ ಮುಂದಿಡುತ್ತಿದೆ. ಉದ್ದೇಶಪೂರ್ವಕವಾಗಿ ಪ್ರತಿಯೊಂದು ವಿಷಯದಲ್ಲೂ ಕಾಂಗ್ರೆಸ್​ಅನ್ನು ಬಿಜೆಪಿಯವರು ಎಳೆದುತರುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Etv Bharat
Etv Bharat

By PTI

Published : Jan 4, 2024, 11:01 PM IST

ನವದೆಹಲಿ: ಕೇಂದ್ರದಲ್ಲಿ 10 ವರ್ಷಗಳ ಆಡಳಿತ ವೈಫಲ್ಯವನ್ನು ಮರೆಮಾಚಲು ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಎತ್ತುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗೂಡಬೇಕೆಂದು ಸಲಹೆ ನೀಡಿದರು.

ದೆಹಲಿಯ ಕಾಂಗ್ರೆಸ್​ ಪ್ರಧಾನ ಕಚೇರಿಯಲ್ಲಿ ಗುರುವಾರ ಖರ್ಗೆ ದೇಶಾದ್ಯಂತ ಇರುವ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು, ರಾಜ್ಯ ಘಟಕಗಳ ಮುಖ್ಯಸ್ಥರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದರು. ಹಿರಿಯ ನಾಯಕರು ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷದ ಕಾರ್ಯತಂತ್ರ ಮತ್ತು ಜನವರಿ 14ರಿಂದ ಪ್ರಾರಂಭವಾಗುವ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಿದ್ಧತೆಗಳ ಜೊತೆಗೆ ಇತರ ಪಕ್ಷಗಳೊಂದಿಗೆ ಸೀಟು ಹಂಚಿಕೆ ಕುರಿತು ಚರ್ಚಿಸಿದರು.

ಈ ಸಭೆಯಲ್ಲಿ ಈ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರನ್ನು ಶ್ಲಾಘಿಸಿದ ಖರ್ಗೆ, ''ಮುಂಬವರು ಮಣಿಪುರದಿಂದ ಮಹಾರಾಷ್ಟ್ರದವರೆಗಿನ ಭಾರತ್ ಜೋಡೋ ನ್ಯಾಯ ಯಾತ್ರೆಯು ರಾಷ್ಟ್ರೀಯ ಚರ್ಚೆಯ ಕೇಂದ್ರಕ್ಕೆ ಸಾಮಾಜಿಕ ನ್ಯಾಯದ ಸಮಸ್ಯೆಗಳನ್ನು ಎತ್ತಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ, ''ಕಳೆದ 10 ವರ್ಷಗಳಲ್ಲಿ ತನ್ನ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿಯು ಭಾವನಾತ್ಮಕ ವಿಷಯಗಳನ್ನು ಜನರ ಮುಂದಿಡುತ್ತಿದೆ. ಅವರು (ಬಿಜೆಪಿಯವರು) ಉದ್ದೇಶಪೂರ್ವಕವಾಗಿ ಪ್ರತಿಯೊಂದು ವಿಷಯದಲ್ಲೂ ಕಾಂಗ್ರೆಸ್​ಅನ್ನು ಎಳೆದುತರುತ್ತಿದ್ದಾರೆ'' ಎಂದೂ ಖರ್ಗೆ ಹೇಳಿದರು. ''ನಾವು ಒಗ್ಗೂಡಿ ಬಿಜೆಪಿಯ ಸುಳ್ಳು, ವಂಚನೆ ಮತ್ತು ತಪ್ಪುಗಳಿಗೆ ಜನರ ಮುಂದೆ ತಕ್ಕ ಪ್ರತ್ಯುತ್ತರ ನೀಡಬೇಕಾಗಿದೆ. ಅಲ್ಲದೇ, ಮಾಧ್ಯಮಗಳಲ್ಲಿ ಆಂತರಿಕ ವಿಚಾರಗಳನ್ನು ಎತ್ತದೇ ತಂಡವಾಗಿ ಕೆಲಸ ಮಾಡಿ'' ಎಂದು ಅವರು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ 25 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿಯವರ ಸೇವೆಯನ್ನು ನಾನು ಗೌರವಿಸುತ್ತೇನೆ. ಕಾಂಗ್ರೆಸ್ ನೇತೃತ್ವದ ಯುಪಿಎ 2004ರಲ್ಲಿ ಎನ್‌ಡಿಎಯನ್ನು ಸೋಲಿಸಿ 10 ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯಲು ಪ್ರತಿ ರಾಜ್ಯದಲ್ಲೂ ಸೋನಿಯಾ ಹೇಗೆ ಕೆಲಸ ಮಾಡಿದೆ ಎಂಬುವುದನ್ನು ಸಭೆಯಲ್ಲಿ ವಿವರಿಸಿದ ಖರ್ಗೆ, ''ಅಂದು ಪ್ರತಿ ಗ್ರಾಮ, ನಗರಗಳಲ್ಲಿ ನಮ್ಮ ಕಾರ್ಯಕರ್ತರು ಎದ್ದು ನಿಂತಿದ್ದರು. ಇಂದು ಪಕ್ಷವನ್ನು ಮುನ್ನಡೆಸಲು ಅದೇ ಸಮರ್ಪಣಾ ಭಾವ ಹಾಗೂ ಕಠಿಣ ಪರಿಶ್ರಮದಿಂದ ಕೆಲಸ ಮಾಡಬೇಕಿದೆ'' ಎಂದರು.

ಬಿಜೆಪಿಯ ಎಲ್ಲ ದಾಳಿಗಳು ಕಾಂಗ್ರೆಸ್ ಮತ್ತು 'ಇಂಡಿಯಾ' ಮೈತ್ರಿಕೂಟದ ಮೇಲೆ ಆಗಿರುವುದನ್ನು ಗಮನಿಸಿದ ಖರ್ಗೆ, "ಇಂಡಿಯಾ' ಮೈತ್ರಿಕೂಟದ ಪ್ರಬಲವಾದ ಕಾರ್ಯಕರ್ತರು, ನೆಲೆ ಮತ್ತು ಸಿದ್ಧಾಂತವನ್ನು ಹೊಂದಿರುವ ಪ್ರಮುಖ ತಳಮಟ್ಟದ ಪಕ್ಷಗಳನ್ನು ಹೊಂದಿದ್ದರೆ, ಬಿಜೆಪಿಯ ಎನ್‌ಡಿಎ ಒಕ್ಕೂಡ ಹೆಸರಿಗೆ ಮಾತ್ರ ಇದೆ. ಆಧುನಿಕ ಭಾರತದ ನಿರ್ಮಾಣಕ್ಕೆ ಕಾಂಗ್ರೆಸ್ ಕೊಡುಗೆಯನ್ನು ನಿರ್ಲಕ್ಷಿಸಲು ಮೋದಿ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ನಾವು ಅವರಿಗೆ ನಿಖರವಾದ ಉತ್ತರ ನೀಡಬೇಕು'' ನಿರ್ದೇಶನ ಮಾಡಿದರು.

''ಸಂಸದೀಯ ಪ್ರಜಾಪ್ರಭುತ್ವ ಮತ್ತು ಆಧುನಿಕ ಭಾರತದ ಅಡಿಪಾಯದಲ್ಲಿ ಕಾಂಗ್ರೆಸ್ ನೀಡಿದ ಕೊಡುಗೆಗಳನ್ನು ಶಾಶ್ವತವಾಗಿ ಸ್ಮರಿಸಬೇಕು. ಏಕೆಂದರೆ, ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಹಗಲಿರುಳು ಶ್ರಮಿಸುವ ಮೂಲಕ 2024ರ ಲೋಕಸಭಾ ಚುನಾವಣೆಯ ನಂತರ ಜನತೆಗೆ ಪರ್ಯಾಯ ಸರ್ಕಾರವನ್ನು ನೀಡಲು ಸಾಧ್ಯವಾಗುತ್ತದೆ'' ಎಂದು ಖರ್ಗೆ ತಿಳಿಸಿದರು.

ಇದನ್ನೂ ಓದಿ:'ಸೋನಿಯಾ ಗಾಂಧಿ ತೆಲಂಗಾಣದಿಂದ ಲೋಕಸಭೆಗೆ ಸ್ಪರ್ಧಿಸಲಿ': ಪಿಸಿಸಿ ನಿರ್ಣಯ ಅಂಗೀಕಾರ

ABOUT THE AUTHOR

...view details