ಹೈದರಾಬಾದ್(ತೆಲಂಗಾಣ): ತಮ್ಮದೇ ಪಕ್ಷದ ರಾಜಕೀಯ ಎದುರಾಳಿಯೊಬ್ಬರು ಮಗನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಹೈದರಾಬಾದ್ನ ಬಿಜೆಪಿ ಕಾರ್ಪೊರೇಟರ್ ಸೇರಿ ಹತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಗಡ್ಡಿಅನ್ನರಾಮ್ ವಿಭಾಗದ ಬಿಜೆಪಿ ಕಾರ್ಪೊರೇಟರ್ ಬದ್ದಂ ಪ್ರೇಮ್ ಮಹೇಶ್ವರ್ ರೆಡ್ಡಿ ಎಂಬುವವರೇ ಬಂಧಿತ ಆರೋಪಿ ಆಗಿದ್ದಾರೆ. ಸರೂರ್‌ನಗರದ ಪಿ ಆ್ಯಂಡ್‌ಟಿ ಕಾಲೋನಿಯ ಬಿಜೆಪಿ ಮುಖಂಡ ಲಂಕಾ ಲಕ್ಷ್ಮೀನಾರಾಯಣ ಹಾಗೂ ಪ್ರೇಮ್ ಹೇಶ್ವರರೆಡ್ಡಿ ನಡುವೆ ರಾಜಕೀಯ ಭಿನ್ನಾಭಿಪ್ರಾಯವಿತ್ತು. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತ ಶ್ರವಣ್ ಎಂಬಾತ ಕೂಡ ತಮ್ಮ ಕುಟುಂಬದ ವಿವಾಹಿತ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರಿಂದ ಲಕ್ಷ್ಮೀನಾರಾಯಣ ಮೇಲೆ ದ್ವೇಷ ಹೊಂದಿದ್ದರು. ಇನ್ನೊಂದೆಡೆ ಲಕ್ಷ್ಮೀನಾರಾಯಣ ಮತ್ತು ಸಹೋದರರಾದ ಲಂಕಾ ಮುರಳಿ ನಡುವೆ ಆಸ್ತಿ ವಿವಾದ ಇದೆ ಎನ್ನಲಾಗ್ತಿದೆ.
ಗಣೇಶ ಮಂಟಪದಿಂದ ಅಪಹರಣ: ಹೀಗಾಗಿಯೇ ಮಹೇಶ್ವರ್ ರೆಡ್ಡಿ, ಲಂಕಾ ಮುರಳಿ ಹಾಗೂ ಶ್ರವಣ್ ಒಂದುಗೂಡಿ ಲಕ್ಷ್ಮೀನಾರಾಯಣ ಅವರ ಮಗನಾದ 21 ವರ್ಷದ ಲಂಕಾ ಸುಬ್ರಹ್ಮಣ್ಯಂ ಅಪಹರಿಸಲು ಸಂಚು ರೂಪಿಸಿದ್ದರು. ಅಂತೆಯೇ, ಸೆ.1ರಂದು ತಡರಾತ್ರಿ ಎರಡು ಕಾರುಗಳಲ್ಲಿ ಆರೋಪಿಗಳು ಪಿ ಆ್ಯಂಡ್ ಟಿ ಕಾಲೋನಿಯಲ್ಲಿರುವ ಲಕ್ಷ್ಮೀ ನಾರಾಯಣ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಮನೆ ಸಮೀಪದ ಗಣೇಶ ಮಂಟಪದಲ್ಲಿ ಕುಳಿತಿದ್ದ ಸುಬ್ರಹ್ಮಣ್ಯಂರನ್ನು ಅಪಹರಿಸಿ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿಗೆ ಕರೆದೊಯ್ದಿದ್ದರು.
ಕಿಂಗ್‌ಪಿನ್ ಮಹೇಶ್ವರ್ ರೆಡ್ಡಿ: ಮಗ ಕಣ್ಮರೆಯಾದ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ್ವಯ ಸರೂರ್‌ನಗರ ಠಾಣೆ ಪೊಲೀಸರು ಮತ್ತು ಎಲ್‌ಬಿ ನಗರ ಠಾಣೆಯ ವಿಶೇಷ ಪೊಲೀಸ್ ತಂಡ ತನಿಖೆ ಆರಂಭಿಸಿ, ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಸುಬ್ರಹ್ಮಣ್ಯಂರನ್ನು ಚಿಂತಪಲ್ಲಿ ಬಳಿ ಪತ್ತೆಹಚ್ಚಿದ್ದಾರೆ. ಅಲ್ಲದೇ, ಸುಬ್ರಹ್ಮಣ್ಯಂ ರಕ್ಷಿಸಿ ಅಪಹರಣಕಾರರನ್ನು ಬಂಧಿಸಿದ್ದಾರೆ. ಜೊತೆಗೆ ಕಾರ್ಪೊರೇಟರ್ ಮಹೇಶ್ವರ್ ರೆಡ್ಡಿ ಮತ್ತು ಮತ್ತೋರ್ವ ಆರೋಪಿಯಾದ ರಾಜ್ಯ ಸಚಿವಾಲಯದ ಹೊರಗುತ್ತಿಗೆ ನೌಕರ ಪುನೀತ್ ತಿವಾರಿ ನಡುವಿನ ವಾಟ್ಸಾಪ್ ಚಾಟ್ನ್ನೂ ಪೊಲೀಸರು ಸಂಗ್ರಹಿಸಿದ್ದಾರೆ. ಈ ಮೂಲಕ ಈ ಅಪಹರಣಕ್ಕೆ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ ಕಿಂಗ್‌ಪಿನ್ ಮಹೇಶ್ವರ್ ರೆಡ್ಡಿ ಎಂದೇ ಪೊಲೀಸರು ಖಚಿತ ಪಡಿಸಿದ್ದಾರೆ.
ಐವರು ಇನ್ನೂ ನಾಪತ್ತೆ: ಇದರ ಆಧಾರದ ಮೇಲೆ ಮಹೇಶ್ವರ್ ರೆಡ್ಡಿ, ಪುನೀತ್, ವನಸ್ಥಲಿಪುರದ ವಿದ್ಯಾರ್ಥಿ ಮಂಜುನಾಥ್, ಖಾಸಗಿ ಕಂಪನಿಯ ಉದ್ಯೋಗಿ ಪಾಲಪರ್ತಿ ರವಿ, ಇತರ ವಿದ್ಯಾರ್ಥಿಗಳಾದ ಕಂದಲ ಪವನಕುಮಾರ್ ರೆಡ್ಡಿ, ರಾವಳ ಹೇಮಂತ್, ಕಾರು ವಾಟರ್ ವಾಷಿಂಗ್ ಕೇಂದ್ರದ ವ್ಯವಸ್ಥಾಪಕ ರೇವಳ್ಳಿ ಚಂದ್ರಕಾಂತ್, ಸಾಫ್ಟ್ವೇರ್ ಉದ್ಯೋಗಿ ಪ್ರಣೀತ್, ಕುಂಭಗಿರಿ ಕಾರ್ತಿಕ್, ಚಿಕನ್ ಸೆಂಟರ್ನ ರವಿ ವರ್ಮ, ಮಹೇಶ್, ಮಾರುತಿ, ಸಾಯಿ ಕಿರಣ್ ಕೂಡಿಕೊಂಡು ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಇನ್ನೂ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಬಲಿ ಕೊಡಲು ಯೋಚಿಸಿದ್ದರು?:ಇನ್ನು,ಅಪಹರಣ ಸಂದರ್ಭದಲ್ಲಿಆರೋಪಿಗಳು ತನಗೆ ಥಳಿಸಿ, ಸಿಗರೇಟ್ನಿಂದ ಹಿಂಸೆ ಕೊಟ್ಟಿದ್ದರು ಎಂದು ಅಪಹರಣಕ್ಕೊಳಗಾದ ಸುಬ್ರಹ್ಮಣ್ಯಂ ಪೊಲೀಸರಿಗೆ ತಿಳಿಸಿದ್ದಾರೆ. ಇದಲ್ಲದೇ, ಆರೋಪಿಗಳು ನನ್ನನ್ನು ಬಲಿ ಕೊಡಲು ಯೋಚಿಸಿದ್ದರು ಎಂಬ ಶಂಕೆ ಇತ್ತು. ಯಾಕೆಂದರೆ ಅವರು ನನಗೆ ಸ್ನಾನ ಮಾಡಿ ಸಿದ್ಧವಾಗುವಂತೆ ಹೇಳಿ, ಕೊರಳಿಗೆ ಹಾರವನ್ನೂ ಹಾಕಿದ್ದರು ಎಂದು ಸುಬ್ರಹ್ಮಣ್ಯಂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಒಂದೇ ಯುವತಿಗಾಗಿ ಜಗಳ: ಭಗ್ನ ಪ್ರೇಮಿಯಿಂದ ಸ್ನೇಹಿತನ ಕೊಲೆ