ಕೋಲ್ಕತ್ತಾ(ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ ನಾಯಕನ ಕೊಲೆಗೆ ಪ್ರತೀಕಾರವಾಗಿ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ 8 ಜನರನ್ನು ಸಜೀವ ದಹನ ಮಾಡಲಾಗಿತ್ತು. ಸಜೀವ ದಹನಗೊಂಡ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿಯನ್ನು ಹತ್ಯಾಕಾಂಡಕ್ಕೂ ಮುನ್ನ ಕೆಟ್ಟದಾಗಿ ಥಳಿಸಲಾಗಿದೆ ಎಂದು ಅವರ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ.
ಮಂಗಳವಾರ ಮುಂಜಾನೆ ಅಪರಿಚಿತರು ಮನೆಗೆ ಬೆಂಕಿ ಹಚ್ಚಿದ್ದರು. ಪರಿಣಾಮ ಸುಟ್ಟು ಕರಕಲಾದ ಶವಗಳ ಮರಣೋತ್ತರ ಪರೀಕ್ಷೆಗಳನ್ನು ನಡೆಸಿದ ವಿಧಿವಿಜ್ಞಾನ ತಜ್ಞರ ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಮೃತಪಟ್ಟವರನ್ನು ಮೊದಲು ಕೆಟ್ಟದಾಗಿ ಥಳಿಸಿ ನಂತರ ಜೀವಂತವಾಗಿ ಸುಡಲಾಗಿದೆ. ಈ ಆಘಾತಕಾರಿ ಮಾಹಿತಿಯನ್ನು ರಾಮಪುರಹತ್ ಆಸ್ಪತ್ರೆಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈವರೆಗೆ 20 ಜನರನ್ನು ಬಂಧಿಸಲಾಗಿದೆ. ಸೋಮವಾರ ಸಂಜೆ ನಡೆದಿದ್ದ ಸ್ಥಳೀಯ ಟಿಎಂಸಿ ನಾಯಕನ ಹತ್ಯೆಯಿಂದಾಗಿ ಈ ಪ್ರತೀಕಾರ ಕೈಗೊಳ್ಳಲಾಗಿದೆ ಎಂದು ಶಂಕಿಸಲಾಗಿದೆ. ನಿರ್ಲಕ್ಷ್ಯದ ಆಧಾರದ ಮೇಲೆ ಕೆಲ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕ ಸ್ವಯಂಸೇವಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಇನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭೇಟಿಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಮ್ಪುರಹತ್ನಲ್ಲಿ ಭದ್ರತೆ ಹೆಚ್ಚಿಸಲಾಗಿದೆ.