ಕೋಟಾ (ರಾಜಸ್ಥಾನ):ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್ - ಯುಜಿ)ಯಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ಬಿಹಾರ ಮೂಲದ 21 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ರೋಷನ್ ಎಂದು ಗುರುತಿಸಲಾಗಿದೆ. ನೀಟ್ ಪರೀಕ್ಷೆಯನ್ನು ಎರಡನೇ ಬಾರಿಗೆ ಉತ್ತೀರ್ಣರಾಗಲು ವಿಫಲನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದ ಸಮಸ್ತಿಪುರ ಮೂಲದ ರೋಷನ್ ಕೋಟಾದ ಮಹಾವೀರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆಗೆ ವಾಸವಾಗಿದ್ದ. ಜೂನ್ 13ರಂದು ನೀಟ್ ಪರೀಕ್ಷೆ ಫಲಿತಾಂಶ ಪ್ರಕಟವಾದಾಗ ನವದೆಹಲಿಯಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿದ್ದ. ಜೂನ್ 14ರಂದು ಬುಧವಾರ ಬೆಳಗ್ಗೆ ಕೋಟಾಕ್ಕೆ ಮರಳಿದ್ದ. ಆದರೆ, ನಂತರದಲ್ಲಿ ರೋಷನ್ ತನ್ನ ದೆಹಲಿ ಮೂಲದ ಚಿಕ್ಕಪ್ಪನ ಫೋನ್ ಕರೆಗಳಿಗೆ ಉತ್ತರಿಸಿರಲಿಲ್ಲ ಎಂದು ಕೋಟಾದ ವಲಯ 4ರ ಉಪ ಪೊಲೀಸ್ ವರಿಷ್ಠಾಧಿಕಾರಿ ಹರ್ಷರಾಜ್ ಸಿಂಗ್ ಖರೇಡಾ ತಿಳಿಸಿದ್ದಾರೆ.
ಹೀಗಾಗಿ ಚಿಕ್ಕಪ್ಪ ಕೋಟಾದಲ್ಲಿ ವಾಸವಾಗಿರುವ ತನ್ನ ಕಿರಿಯ ಸಹೋದರ ಸುಮನ್ ಎಂಬವರಿಗೆ ಕರೆ ಮಾಡಿ ರೋಷನ್ ಫೋನ್ ಸ್ವೀಕರಿಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ರೋಷನ್ ವಾಸವಾಗಿದ್ದ ಕೋಣೆಗೆ ಹೋಗುವಂತೆ ನೋಡುವಂತೆ ಸೂಚಿಸಿದ್ದಾರೆ. ಅದರಂತೆ, ಸುಮನ್ ರೋಷನ್ ಕೋಣೆಗೆ ತೆರಳಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದು ಅವರು ವಿವರಿಸಿದರು.
ರೋಷನ್ ಕಳೆದ ಎರಡು ವರ್ಷಗಳಿಂದ ನೀಟ್-ಯುಜಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಎರಡನೇ ಬಾರಿಗೂ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಎಂದು ಶಂಕಿಸಲಾಗಿದೆ. ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ.