ನವದೆಹಲಿ: ಮೋದಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಒಕ್ಕೂಟ ಮತ್ತಷ್ಟು ಬಲಹೀನವಾಗುತ್ತಿದೆಯೇ?, ಯುಪಿಎ ಮೈತ್ರಿಕೂಟದಲ್ಲಿ ಒಡಕಿದೆಯೇ? ಎಂಬ ಪ್ರಶ್ನೆಗಳನ್ನು ಕೇಳಿಕೊಂಡರೆ 'ಹೌದು' ಎಂಬ ಉತ್ತರ ಬರುತ್ತದೆ. ಈ ಹೌದು ಎಂಬ ಉತ್ತರ ಬರಲು ಅತಿ ಮುಖ್ಯವಾದ ಸಾಕ್ಷ್ಯ ಶನಿವಾರ ವಿರೋಧ ಪಕ್ಷಗಳ ಒಕ್ಕೂಟ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಕೋಮು ಗಲಭೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಕೇಂದ್ರದ ವಿಪಕ್ಷಗಳ ಒಕ್ಕೂಟ ಶನಿವಾರ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಆದರೆ ಈ ಜಂಟಿ ಹೇಳಿಕೆಯಲ್ಲಿ ದಕ್ಷಿಣ ಭಾರತದ ಜೆಡಿಎಸ್, ಟಿಆರ್‌ಎಸ್ ಮತ್ತು ಟಿಡಿಪಿ ಪಕ್ಷಗಳ ನಾಯಕರ ಸುಳಿವೇ ಇಲ್ಲ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿಯ ಶರದ್ ಪವಾರ್ ಮತ್ತು ಟಿಎಂಸಿ ಅಧಿನಾಯಕಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ 13 ವಿರೋಧ ಪಕ್ಷಗಳ ಹಿರಿಯ ನಾಯಕರು ಜಂಟಿ ಹೇಳಿಕೆ ನೀಡಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿದ್ದರೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಜಾತ್ಯತೀತ ಜನತಾ ದಳ ಪಕ್ಷದ ನಾಯಕ ಹಾಗೂ ಹೆಚ್.ಡಿ.ದೇವೇಗೌಡ ಮತ್ತು ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರನ್ನು ಈ ಜಂಟಿ ಹೇಳಿಕೆ ಒಳಗೊಂಡಿಲ್ಲ.
ಇಲ್ಲಿ ಅತ್ಯಂತ ಮುಖ್ಯವಾಗಿ ಗಮನಿಸಬೇಕಾದ ಅಂಶವೊಂದಿದೆ. ಬಿಜೆಪಿ ವಿರುದ್ಧ ಒಂದಷ್ಟು ಪಕ್ಷಗಳನ್ನು ಒಟ್ಟುಗೂಡಿಸಿ ರಾಷ್ಟ್ರ ರಾಜಕೀಯದಲ್ಲಿ ತೊಡಗಿಕೊಳ್ಳಬೇಕು ಎಂಬ ಉತ್ಸಾಹದಲ್ಲಿದ್ದ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಆಸೆಗೆ ತಣ್ಣೀರೆರಚಿದಂತಾಗಿದೆ. 2024ರ ಲೋಕಸಭಾ ಚುನಾವಣೆಗೆ ಮುನ್ನವೇ ಈ ರೀತಿಯ ಬಿರುಕು ಅಚ್ಚರಿ ಮೂಡಿಸುತ್ತಿದೆ. ಹಾಲಿ ಸಿಎಂ ಆಗಿರುವ ಪ್ರಭಾವಿ ನಾಯಕರನ್ನೇ ವಿರೋಧ ಪಕ್ಷದ ಪಾಳಯದಿಂದ ಪ್ರತ್ಯೇಕಿಸಿರುವುದು ಆ ಪಾಳಯದ ಅವನತಿಯನ್ನು ಸೂಚಿಸುತ್ತಿದೆ ಎನ್ನಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ತೆಲಂಗಾಣ ಸಿಎಂ ತಮ್ಮ ರಾಷ್ಟ್ರೀಯ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಬಹಿರಂಗಪಡಿಸಿದ್ದರು. ಪ್ರಧಾನಿ ಮೋದಿಗೆ ಪರ್ಯಾಯವಾಗಿ ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಅವರು ಮಾಡಿದ್ದರು. ಬಿಜೆಪಿಯನ್ನು ಎದುರಿಸಲು ತೃತೀಯ ರಂಗವನ್ನು ರಚಿಸಲು ಸಮಾನ ಮನಸ್ಕ ಪಕ್ಷಗಳು ಒಗ್ಗೂಡುವಂತೆ ಅವರು ಕರೆ ನೀಡಿದ್ದರು. ಅಷ್ಟೇ ಅಲ್ಲದೇ ಬಿಜೆಪಿ ವಿರೋಧಿ ಪಕ್ಷಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಪ್ರಯತ್ನಗಳನ್ನು ತೀವ್ರಗೊಳಿಸುವ ಪ್ರಯತ್ನದಲ್ಲಿ ಅವರು ಹಲವಾರು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದರು. ಫೆಬ್ರವರಿಯಲ್ಲಿ ಮುಂಬೈ ಭೇಟಿಯ ವೇಳೆ ಅವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನೂ ಭೇಟಿ ಮಾಡಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಕೂಡ ಜಂಟಿ ಹೇಳಿಕೆಯಲ್ಲಿ ಸೇರ್ಪಡೆಯಾಗಿಲ್ಲ. ಇದಕ್ಕೆ ಕಾರಣ ದೇವೇಗೌಡರು ಇತ್ತೀಚೆಗೆ ಪ್ರಧಾನಿ ಪರ, ಕೇಂದ್ರ ಬಿಜೆಪಿ ಪರ ಒಲವು ತೋರುತ್ತಿರುವುದೂ ಇರ ಟಿಡಿಪಿಯನ್ನು 'ಸಮಾನ ಮನಸ್ಸಿನ' ಪಕ್ಷಗಳ ಪಟ್ಟಿಯಿಂದ ಹೊರಗಿಟ್ಟಿರುವುದು ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸಂಭಾವ್ಯ ಜಗಳದ ಕಡೆಗೆ ಸೂಚಿಸುತ್ತದೆ. ಎರಡು ಪಕ್ಷಗಳು ಈ ಹಿಂದೆ ಪರಸ್ಪರ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರೂ ಈಗ ಪಾಳಯದಿಂದ ಹೊರಗಿಟ್ಟಿರುವುದು ಕುತೂಹಲ ಕೆರಳಿಸಿದೆ.
ಜಂಟಿ ಹೇಳಿಕೆ ನೀಡಿದ 13 ಪಕ್ಷಗಳ ನಾಯಕರು:ಸೋನಿಯಾ ಗಾಂಧಿ (ಕಾಂಗ್ರೆಸ್), ಶರದ್ ಪವಾರ್ (ಎನ್‌ಸಿಪಿ), ಮಮತಾ ಬ್ಯಾನರ್ಜಿ (ಟಿಎಂಸಿ), ಎಂ ಕೆ ಸ್ಟಾಲಿನ್ (ಡಿಎಂಕೆ), ಸೀತಾರಾಮ್ ಯೆಚೂರಿ ಸಿಪಿಐ (ಎಂ), ಫಾರೂಕ್ ಅಬ್ದುಲ್ಲಾ (ಎನ್‌ಸಿ), ತೇಜಸ್ವಿ ಯಾದವ್ (ಆರ್‌ಜೆಡಿ), ಡಿ ರಾಜಾ (ಸಿಪಿಐ) , ದೇಬಬ್ರತ ಬಿಸ್ವಾಸ್ (ಫಾರ್ವರ್ಡ್ ಬ್ಲಾಕ್), ಮನೋಜ್ ಭಟ್ಟಾಚಾರ್ಯ (ಆರ್‌ಎಸ್‌ಪಿ), ಪಿಕೆ ಕುನ್ಹಾಲಿಕುಟ್ಟಿ (ಐಯುಎಂಎಲ್), ದೀಪಂಕರ್ ಭಟ್ಟಾಚಾರ್ಯ( ಸಿಪಿಐ-ಎಂಎಲ್)
ಇದನ್ನೂ ಓದಿ:ಕೇಂದ್ರದ ನಿರ್ಲಕ್ಷ್ಯದಿಂದ ಕೋವಿಡ್ ಸೋಂಕಿಗೆ 40 ಲಕ್ಷ ಮಂದಿ ಸಾವು: ರಾಹುಲ್ ಗಾಂಧಿ