ಹೈದರಾಬಾದ್: 2019ರ ಫೆಬ್ರವರಿ 14 ಮಧ್ಯಾಹ್ನ 3.15. ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಜೈಷ್-ಏ ಮೊಹಮ್ಮದ್ ಉಗ್ರ ಸಂಘಟನೆ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿತು. ಇದರಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಸೈನಿಕರ ಮರಣಕ್ಕೆ ದೇಶವೇ ಕಂಬನಿ ಮಿಡಿಯಿತು. ದೇಶಕ್ಕಾಗಿ ಮಡಿದ ಯೋಧರ ನೆನಪು ಸದಾ ನಮ್ಮೊಂದಿಗೆ ಇರಬೇಕು ಎಂಬ ಭಾವನೆಯಿಂದ ಇಲ್ಲೊಬ್ಬಾತ ಅಪರೂಪದ ಸೇವೆ ಸಲ್ಲಿಸಿ ಗಮನ ಸೆಳೆದಿದ್ದಾರೆ.
ಬೆಂಗಳೂರಿನ ಯಲಹಂಕ ನಿವಾಸಿ 39 ವರ್ಷದ ಉಮೇಶ್ ಗೋಪಿನಾಥ್ ಜಾಧವ್, ಎಲ್ಲಾ ಪುಲ್ವಾಮಾ ಹುತಾತ್ಮರ ಮನೆಗಳಿಗೆ ಭೇಟಿ ಮಾಡಿ, ಅವರ ಮನೆಗಳ ಎದುರಿನ ಹಿಡಿಮಣ್ಣನ್ನು ಸಂಗ್ರಹಿಸಿ ಸಿಆರ್ಪಿಎಫ್ಗೆ ಒಪ್ಪಿಸಿದ್ದಾರೆ. ಮೂಲತಃ ಮಹಾರಾಷ್ಟ್ರದ ಜಾಧವ್, ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಯಲಹಂಕದಲ್ಲಿ ವಾಸವಿದ್ದಾರೆ.
ಈ ಸಂಕಲ್ಪ ಮಾಡಿದ್ದು ಹೀಗೆ:ಪುಲ್ವಾಮ ದಾಳಿ ನಡೆದ ದಿನದಂದು ಜಾಧವ್ ರಾಜಸ್ಥಾನದ ಅಜ್ಮೇರ್ನಲ್ಲಿದ್ದರು. ಅಲ್ಲಿಂದ ಬೆಂಗಳೂರಿಗೆ ವಾಪಾಸಾಗಲು ಅಜ್ಮೇರ್ ವಿಮಾನ ನಿಲ್ದಾಣದಲ್ಲಿ ಕುಳಿತಿದ್ದಾಗ, ಭಯೋತ್ಪಾದಕ ದಾಳಿಯಿಂದ ಪುಲ್ವಾಮಾದಲ್ಲಿ 40 ಯೋಧರು ಮಡಿದಿದ್ದಾರೆ ಎಂಬ ಸುದ್ದಿ ಟಿವಿ ಪರದೆಗಳಲ್ಲಿ ಬಿತ್ತರಗೊಳ್ಳುತ್ತಿತ್ತು. ಅದನ್ನ ನೋಡಿ ತುಂಬಾ ಆಘಾತವಾಯಿತು. ಅವತ್ತೇ ಹುತಾತ್ಮರಿಗಾಗಿ ಏನಾದರೂ ಮಾಡಬೇಕೆಂದು ಸಂಕಲ್ಪ ಮಾಡಿದ್ದೆ. ತುಂಬಾ ದಿನಗಳು ನೊಂದೆ. ನಿದ್ದೆಯೇ ಬರುತ್ತಿರಲಿಲ್ಲ. ಏಕಾಂತದಲ್ಲಿ ಕೂತು ಯೋಚಿಸುತ್ತಿದ್ದಾಗ ಮೃತ ಯೋಧರ ಮನೆಗಳಿಗೆ ತೆರಳಿ, ಅವರ ಮನೆಗಳ ಎದುರು ಇರುವ ಮಣ್ಣು ಸಂಗ್ರಹಿಸಬೇಕು ಎಂದುಕೊಂಡೆ. ಈ ಕಾರ್ಯಕ್ಕೆ ಸಿಆರ್ಪಿಎಫ್ ಬೆಂಬಲ ನೀಡಿತು ಎಂದು ಜಾಧವ್ ವಿವರಿಸಿದರು.
ಪಯಣ ಆರಂಭಿಸಿದ್ದು ಹೀಗೆ:ಮೊದಲು ನೀಲಿನಕ್ಷೆ ರೂಪಸಿದೆ. ಮೃತ ಯೋಧರ ಮನೆಗಳು ಎಲ್ಲೆಲ್ಲಿವೆ ಎಂಬುದನ್ನು ಪಟ್ಟಿ ಮಾಡಿದೆ. ಏಪ್ರಿಲ್ 9ರಂದು ಯಲಹಂಕದಿಂದ ಬೇಕಾದ ಹಣ ಹೊಂದಿಸಿ ಸಂಚಾರ ಪ್ರಾರಂಭಿಸಿದೆ. ಆದರೆ, ಕೆಲಸ ಅಂದುಕೊಂಡಂತೆ ಸುಲಭವಾಗಿರಲಿಲ್ಲ. ಹುತಾತ್ಮರಾದ 40 ಯೋಧರ ಮನೆಗಳು 16 ರಾಜ್ಯಗಳಲ್ಲಿವೆ. ಇದಕ್ಕಾಗಿ 11 ತಿಂಗಳಲ್ಲಿ 61,000 ಕಿ.ಮೀ. ಸಂಚರಿಸಬೇಕಾಯಿತು ಎಂದು ತಮ್ಮ ನೆನಪಿನ ಬುತ್ತಿ ಹಂಚಿಕೊಂಡರು.
ಕರ್ನಾಟಕದ ನಂತರ ಕೇರಳ, ತಮಿಳುನಾಡು, ಗೋವಾ, ಪಾಂಡಿಚೆರಿ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಜೈಪುರಕ್ಕೆ ಪ್ರಯಾಣ ಬೆಳೆಸಿದೆ. ಹುತಾತ್ಮರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದೆ. ಭಾರತೀಯ ಪ್ರಜೆಯಾಗಿ ನನ್ನ ಕರ್ತವ್ಯ ಪೂರೈಸಿದ್ದೇನೆ ಎಂದು ಜಾಧವ್ ಹೇಳಿಕೊಂಡಿದ್ದಾರೆ. ಹುತಾತ್ಮರ ನೆನಪಿಗಾಗಿ ಲೆಥ್‌ಪೊರಾ ಪ್ರದೇಶದ ಸೇನಾ ಶಿಬಿರದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಇಂದು ಅದೇ ಸ್ಮಾರಕವನ್ನ ಉದ್ಘಾಟಿಸಲಾಯಿತು. ಉಮೇಶ್ ಗೋಪಿನಾಥ್ ಜಾಧವ್ ಕೂಡ ಇದರಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.